ಹುಬ್ಬಳ್ಳಿ, ಮಾ.9- ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ಅವರು ಸುಪ್ರೀಂಕೋರ್ಟ್ಗೆ ಹೇಳಿಕೆ ನೀಡಿ ರಫೇಲ್ ವ್ಯವಹಾರಕ್ಕೆ ಸಂಬಂಧಪಟ್ಟ ದಾಖಲೆಗಳು ಕಳ್ಳತನವಾಗಿದೆ ಎಂದು ತಿಳಿಸಿದ್ದರು. ಆದರೆ ನಿನ್ನೆ ಕೇಂದ್ರ ಸರ್ಕಾರ ಮತ್ತೊಂದು ಹೇಳಿಕೆ ನೀಡಿ ದಾಖಲೆಗಳು ಕಳ್ಳತನವಾಗಿಲ್ಲ, ಅದರ ಜೆರಾಕ್ಸ್ ಪ್ರತಿಗಳು ನಮ್ಮ ಬಳಿ ಇವೆ ಎಂದು ಹೇಳಿದೆ. ಇದರಲ್ಲಿ ಯಾವುದನ್ನು ನಂಬಬೇಕು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಕೇಂದ್ರ ಸರ್ಕಾರ ನ್ಯಾಯಾಲಯಕ್ಕೆ ದಾಖಲೆಗಳನ್ನು ಕೊಡದೆ ದಿನಕ್ಕೊಂದು ರೀತಿಯ ಹೇಳಿಕೆಯನ್ನು ನೀಡುತ್ತಿರುವುದನ್ನು ನೋಡಿದರೆ ರಫೇಲ್ ಹಗರಣದಲ್ಲಿ ದುಡ್ಡು ಹೊಡೆದಿರುವುದು ನಿಜ. ಅದರಲ್ಲಿ ಮೋದಿ ಭಾಗಿಯಾಗಿದ್ದಾರೆ ಎಂಬುದೂ ನಿಜ ಎಂಬಂತಾಗಿದೆ.
ಇವರು ಪ್ರಾಮಾಣಿಕವಾಗಿದ್ದರೆ ನ್ಯಾಯಾಲಯಕ್ಕೆ ದಾಖಲೆಗಳನ್ನು ಕೊಡಬೇಕಿತ್ತು. ದಾಖಲೆ ಕಳುವಾಗಿವೆ ಎಂದು ಸುಳ್ಳು ಹೇಳುತ್ತಿರುವುದೇಕೆ?ಎಂದು ಪ್ರಶ್ನಿಸಿದ ಅವರು, ಮಾಜಿ ರಕ್ಷಣಾ ಸಚಿವ ಆಂಟನಿ ಅವರು ಕೇಳುವ ಪ್ರಶ್ನೆಗೆ ಕೇಂದ್ರ ಸರ್ಕಾರ ಇದುವರೆಗೂ ಉತ್ತರ ನೀಡದಿರುವುದು ಏಕೆ ಎಂದರು.
ಒಂದು ಬಾರಿ ರಕ್ಷಣೆಗೆ ಸಂಬಂಧಪಟ್ಟಂತೆ ರಹಸ್ಯ ದಾಖಲೆಗಳನ್ನು ನೀಡಲಾಗುವುದಿಲ್ಲ ಎನ್ನುತ್ತಾರೆ, ಮತ್ತೊಂದು ಬಾರಿ ಕಳ್ಳತನವಾಗಿವೆ ಎನ್ನುತ್ತಾರೆ. ಅದರ ಹಿಂದೆಯೇ ಬಿಜೆಪಿ ದಾಖಲೆಗಳು ಕಳ್ಳತನವಾಗಿಲ್ಲ ಎಂಬ ಹೇಳಿಕೆ ನೀಡುತ್ತಿದೆ. ಈ ರೀತಿ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ 20 ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುತ್ತದೆ ಎಂಬ ವಿಶ್ವಾಸ ನಮಗಿದೆ. ಜನರ ನಾಡಿಮಿಡಿತ ಆಧರಿಸಿ ನಾನು ಹೇಳುತ್ತಿದ್ದೇನೆ. ಆದರೆ ಬಿಜೆಪಿಯವರು ಗಡಿಯಲ್ಲಿ ಯೋಧರು ಸತ್ತಿದ್ದಾರೆ ಅದರಿಂದಾಗಿ 25 ಸ್ಥಾನ ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರೇ ಇದನ್ನು ಬಹಿರಂಗಪಡಿಸಿದ್ದಾರೆ. ಯಾರೇ ಆದರೂ ದೇಶದ ರಕ್ಷಣೆ ವಿಷಯದಲ್ಲಿ, ಸೈನಿಕರ ವಿಷಯದಲ್ಲಿ ರಾಜಕಾರಣ ಮಾಡಬಾರದು ಎಂದು ಅವರು ಹೇಳಿದರು.
ಕಾಂಗ್ರೆಸ್ಗೆ ಸೇನೆಯ ಮೇಲೆ ಅಪಾರ ನಂಬಿಕೆ ಇದೆ. ಜೈ ಜವಾನ್, ಜೈ ಕಿಸಾನ್ ಎಂಬುದು ನಮ್ಮ ಪಕ್ಷದ ಘೋಷಣೆ. ಲಾಲ್ಬಹದ್ದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿದ್ದಾಗ ಈ ಘೋಷಣೆ ಹೊರಡಿಸಿದ್ದಾರೆ. ಬಿಜೆಪಿ ಅಥವಾ ಆರ್ಎಸ್ಎಸ್ ಈ ಘೋಷಣೆ ಹೊರಡಿಸಿಲ್ಲ ಎಂದು ಸಿದ್ದರಾಮಯ್ಯ ಟಾಂಗ್ ನೀಡಿದರು.
ಕೆಲವರು ಅಭಿಮಾನದಿಂದ ಕೊಪ್ಪಳ ಸೇರಿದಂತೆ ವಿವಿಧ ಕ್ಷೇತ್ರಗಳ ಹೆಸರನ್ನು ಸೂಚಿಸಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ನ ಹೈಕಮಾಂಡ್ ನಾಯಕರು ನನ್ನ ಜೊತೆ ಈ ಬಗ್ಗೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ನಾಮದ ಬಗ್ಗೆ ನನ್ನ ಹೇಳಿಕೆಯನ್ನು ತಿರುಚಲಾಗಿದೆ. ತಿಲಕ ಹಾಕೋರನ್ನು ನಾನು ಅವಮಾನಿಸಿಲ್ಲ, ಹೆಣ್ಣು ಮಕ್ಕಳೂ ಕೂಡ ತಿಲಕವಿಡುತ್ತಾರೆ. ತಿಲಕದ ಬಗ್ಗೆ ನನಗೆ ಗೌರವವಿದೆ. ನಾನು ಹೇಳಿರುವುದು ಉದ್ದುದ್ದ ನಾಮ ಇಡುವವರ ಬಗ್ಗೆ. ಎರಡು ಬಿಳಿ, ಒಂದು ಕೆಂಪು ನಾಮ ಇಡುವವರ ಬಗ್ಗೆಯೂ ನನಗೆ ಗೌರವವಿದೆ. ಆದರೆ ಕೆಂಪಗೆ, ಉದ್ದಕ್ಕೆ ನಾಮ ಎಳೆಯುತ್ತಾರಲ್ಲ, ಅವರನ್ನು ಕಂಡರೆ ಭಯ ಎಂದು ಹೇಳಿದ್ದೇನೆ. ಏಕೆಂದರೆ ಮಾರಮ್ಮನ ಜಾತ್ರೆಯಲ್ಲಿ ಬಲಿ ಕೊಡುವವರು ಮತ್ತು ಕ್ರಿಮಿನಲ್ಗಳು ಆ ರೀತಿಯ ನಾಮವಿಡುತ್ತಾರೆ ಎಂದು ಹೇಳಿದರು.
ನನಗಿಂತ ಹಿಂದೂ ಯಾರಿದ್ದಾರೆ. ಬಿಜೆಪಿಯವರದು ಯಾವ ಹಿಂದುತ್ವ? ನನ್ನ ಪ್ರಕಾರ ಹಿಂದುತ್ವ ಎಂದರೆ ಮಾನವೀಯತೆ ಇರಬೇಕು. ನನ್ನ ಹಿಂದುತ್ವದಲ್ಲಿ ಮಾನವೀಯತೆ ಇದೆ. ಬಿಜೆಪಿಯವರ ಹಿಂದುತ್ವದಲ್ಲಿ ಮನುಷ್ಯತ್ವ ಇಲ್ಲ ಎಂದು ತಿರುಗೇಟು ನೀಡಿದರು.
ರಾಹುಲ್ ಗಾಂಧಿ ಬುದ್ಧ್ದಿ ಜೀವಿಗಳ ಜೊತೆ ಚರ್ಚೆ ಮಾಡಲಿದ್ದಾರೆ. ಯಾರು ಯಾರು ಬರಲಿದ್ದಾರೆ ಎಂಬುದು ಗೊತ್ತಿಲ್ಲ. ಬುದ್ದಿ ಜೀವಿಗಳ ಜೊತೆ ಸೇರಿ ಚುನಾವಣೆ ಹಾಗೂ ಪ್ರಣಾಳಿಕೆ ಮಾಡುವ ವಿಚಾರದ ಕುರಿತು ಬಹುಶಃ ಚರ್ಚೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.