ಉಗ್ರ ಮಸೂದ್ ಅಜರ್ ನನ್ನು ಭಾರತದಿಂದ ಬಿಡುಗಡೆಮಾಡಿದ್ದು ಯಾರು ಎಂಬುದನ್ನೂ ಪ್ರಧಾನಿ ಮೋದಿ ಹೇಳಬೇಕು: ರಾಹುಲ್ ಗಾಂಧಿ

ಹಾವೇರಿ: ಜೆಷ್ ಎ ಮೊಹಮ್ಮದ್ ಮುಖ್ಯಸ್ಥ, ಉಗ್ರ ಮೌಲಾನಾ ಮಸೂದ್ ಅಜರ್ ನನ್ನು ಬಿಟ್ಟುಕೊಟ್ಟಿದ್ದು ಯಾರು ಎಂಬುದನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶಕ್ಕೆ ಹೇಳಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.

ಹಾವೇರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಜಮ್ಮು – ಕಾಶ್ಮೀರದ ಪುಲ್ವಾಮದಲ್ಲಿ 40ಕ್ಕೂ ಹೆಚ್ಚು ಸಿ.ಆರ್.ಪಿ.ಎಫ್ ಯೋಧರು ಹುತಾತ್ಮರಾದ ಘಟನೆಗೆ ಬಿಜೆಪಿಯೇ ನೇರ ಹೊಣೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

ಪುಲ್ವಾಮಾ ಉಗ್ರರ ದಾಳಿ ನಡೆಸಿದ್ದು ಜೈಷ್ ಎ ಮೊಹಮ್ಮದ್ ಸಂಘಟನೆ. 1999ರಲ್ಲಿ ಬಿಜೆಪಿ ಸರಕಾರ ಹಾಗೂ ಸಚಿವರು ಉಗ್ರ ಮೌಲಾನಾ ಮಸೂದ್ ಅಜರ್‌ನನ್ನು ಸೆರೆಯಿಂದ ಬಿಡಿಸಿ, ವಿಮಾನದಲ್ಲಿ ಕರೆದುಕೊಂಡು ಹೋಗಿ ಬಿಟ್ಟುಕೊಟ್ಟು ಬಂದಿದ್ದೀರಿ. ಈ ಬಗ್ಗೆಯೂ ದೇಶದ ಜನರಿಗೆ ಪ್ರಧಾನಿ ಮೋದಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಂದು ಸಚಿವರಾಗಿದ್ದ ಜಸ್ವಂತ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರು ಭಯೋತ್ಪಾದಕರನ್ನು ಬಿಡುಗಡೆ ಮಾಡಲು ಕಂದಹಾರ್ ಗೆ ತೆರಳಿದ್ದರು. ಪುಲ್ವಾಮ ಘಟನೆ ಬಗ್ಗೆ ಪ್ರಸ್ತಾಪಿಸುವ ಮೋದಿ ಅವರು, ಮಸೂದ್ ಅಜರ್ ಅವರನ್ನು ಬಿಡುಗಡೆ ಮಾಡಿದ್ದು ಯಾಕೆ ಎನ್ನುವುದನ್ನು ಹೇಳಬೇಕೆಂದು ಒತ್ತಾಯಿಸಿದ್ದಾರೆ.

ಇನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕಳೆದ ಐದು ವರ್ಷಗಳ ಅವಧಿಯಲ್ಲಿ ಉದ್ಯೋಗ ಸೃಷ್ಟಿ ದಾಖಲೆ ಪ್ರಮಾಣದಲ್ಲಿ ಕುಸಿದಿದೆ. ಸರ್ಕಾರ ರೈತರು, ಬಡವರ ಪರ ಆಡಳಿತ ನಡೆಸಿಲ್ಲ. ಕೆಲವು ಕಾರ್ಪೋರೇಟ್ ಕಂಪೆನಿಗಳ ಪರವಾಗಿ ಕಾರ್ಯನಿರ್ವಹಿಸಿತು. ಸಣ್ಣ ಮತ್ತು ಮಧ್ಯಮ ಪ್ರಮಾಣದ ವ್ಯಾಪಾರಸ್ಥರು, ಸಣ್ಣ ಕೈಗಾರಿಕೆಗಳಿಗಾಗಿ ಈ ಎನ್ ಡಿಎ ಸರ್ಕಾರ ಏನನ್ನೂ ಮಾಡಿಲ್ಲ ಎಂದರು.

ಯುದ್ಧ ವಿಮಾನ ಖರೀದಿ ಒಪ್ಪಂದಲ್ಲಿ ಪ್ರಧಾನಿ ಮೋದಿ ಅವರು 30 ಸಾವಿರ ಕೋಟಿ ರೂ ಕಳ್ಳತನ ಮಾಡಿ ಅದನ್ನು ಅನಿಲ್ ಅಂಬಾನಿ ಜೇಬಿಗೆ ಹಾಕಿದ್ದಾರೆ. ದೇಶದ ಪ್ರತಿಷ್ಠಿತ ಎಚ್ಎಎಲ್ ಸಂಸ್ಥೆಯ ಬದಲಿಗೆ ಅನಿಲ್ ಅಂಬಾನಿ ಕಂಪೆನಿಯನ್ನು ಸಹಭಾಗಿದಾರ ಕಂಪೆನಿಯಾಗಿ ಆಯ್ಕೆ ಮಾಡಿಕೊಳ್ಳುವಂತೆ ಮೋದಿ ಅವರು ಫ್ರಾನ್ಸ್ ಅಧ್ಯಕ್ಷರಿಗೆ ಸೂಚಿಸಿದ್ದರು. ದೇಶದ ತುಂಬೆಲ್ಲಾ ಅನಿಲ್ ಅಂಬಾನಿ, ಅದಾನಿ ಅವರದ್ದೇ ಹಾವಳಿಯಾಗಿದೆ.‌

ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಲ್ಲಿ ಬಡವರಿಗೆ ಕನಿಷ್ಠ ಆದಾಯ ಖಾತರಿಪಡಿಸುವ ಕಾನೂನು ಜಾರಿಗೆ ತರಲಾಗುವುದು ಇದರಿಂದ ಉದ್ಯೋಗ ದೊರೆಯದ ಯುವ ಸಮೂಹಕ್ಕೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ಪ್ರತಿಯೊಬ್ಬರ ಖಾತೆಗೂ ನೇರವಾಗಿ ಹಣ ಜಮಾ ಮಾಡಲಾಗುವುದು ಎಂದು ರಾಹುಲ್ ಭರವಸೆ ನೀಡಿದರು.

ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಸರ್ಕಾರ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆ ಹೆಚ್ಚು ಯುವ ಜನಾಂಗಕ್ಕೆ ಅನುಕೂಲವಾಗುತ್ತಿದೆ. ಈ ಕಾರ್ಯಕ್ರಮದಿಂದ ಹೆದರಿಕೊಂಡಿರುವ ಪ್ರಧಾನಿ ಮೋದಿ, ಒಬ್ಬ ರೈತರಿಗೆ ದಿನಕ್ಕೆ ಮೂರುವರೆ ರೂಪಾಯಿಯನ್ನು ಖಾತೆಗೆ ಜಮಾ ಮಾಡುವ ” ರೈತ ಸಮ್ಮಾನ್ ” ಯೋಜನೆ ಘೋಷಿಸಿದ್ದಾರೆ. ಸಣ್ಣ ಪ್ರಮಾಣದ ಹಣವನ್ನು ರೈತರ ಖಾತೆಗೆ ಜಮಾ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದರು.

Rahul Gandhi Asks PM To Tell Nation Who Released Masood Azhar From Jail

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ