ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಸಾಲ ಮನ್ನಾ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಹಾವೇರಿ, ಮಾ.9- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶಾದ್ಯಂತ ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು.

ಹಾವೇರಿ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಮುಂದಿನ ಲೋಕಸಭೆ ಚುನಾವಣೆ ಕೇವಲ ರಾಹುಲ್‍ಗಾಂಧಿ-ಮೋದಿ ನಡುವಿನ ಅಥವಾ ಬಿಜೆಪಿ-ಕಾಂಗ್ರೆಸ್ ನಡುವಿನ ಹೋರಾಟವಲ್ಲ. ಸರ್ವಾಧಿಕಾರಿ ಧೋರಣೆ ಮತ್ತು ಪ್ರಜಾಪ್ರಭುತ್ವ ಪರವಾದ ಹೋರಾಟವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿಯವರು ಅಚ್ಚೆ ದಿನ್ ಬರಲಿದೆ ಎಂದರು. ಆದರೆ ದೇಶದ ಸಾಮಾನ್ಯಜನರಿಗೆ ಒಳ್ಳೆ ದಿನ ಬರಲಿಲ್ಲ. ಅಂಬಾನಿ, ಅದಾನಿ, ನೀರವ್ ಮೋದಿಯಂತಹ ಶ್ರೀಮಂತ ಉದ್ಯಮಿಗಳಿಗೆ ಮಾತ್ರ ಅಚ್ಚೆ ದಿನ್ ಬಂದಿದೆ. ಮೋದಿಯವರು ಈಗಾಗಲೇ ಎರಡು ಬಾರಿ ಕರ್ನಾಟಕದಲ್ಲಿ ಪ್ರವಾಸ ಮಾಡಿ ಪ್ರಚಾರ ಮಾಡಿದ್ದಾರೆ.

ಹುಬ್ಬಳ್ಳಿ ಮತ್ತು ಕಲಬುರಗಿ ಅವರ ಪ್ರಚಾರ ಸಭೆಗಳಲ್ಲಿ ಜನಸಾಮಾನ್ಯರ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿಲ್ಲ. ಅವರು ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿರುವ ಬಗ್ಗೆ ಎಲ್ಲಿಯೂ ಚರ್ಚೆ ಮಾಡಿಲ್ಲ. ಜನರ ಭಾವನಾತ್ಮಕ ವಿಷಯಗಳನ್ನೇ ಪ್ರಸ್ತಾಪಿಸಿ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಚುನಾವಣೆ ಘೋಷಣೆಯಾಗುವ ವರ್ಷದಲ್ಲಿ ಕೇಂದ್ರ ಸರ್ಕಾರ ರೈತ ಸಮ್ಮಾನ್ ಯೋಜನೆ ಘೋಷಣೆ ಮಾಡಿ ವರ್ಷಕ್ಕೆ 6 ಸಾವಿರ ರೂ.ಗಳನ್ನು ರೈತರ ಖಾತೆಗೆ ಹಾಕುವುದಾಗಿ ಹೇಳಿದ್ದಾರೆ. ಈ ಯೋಜನೆಯನ್ನು ಮೋದಿ ಅಧಿಕಾರಕ್ಕೆ ಬಂದ ಮೊದಲ ವರ್ಷಅಥವಾ ಎರಡನೇ ವರ್ಷದಲ್ಲಿ ಏಕೆ ಮಾಡಲಿಲ್ಲ ಎಂದು ಚರ್ಚಿಸಿದರು.

ರೈತರ ಸಾಲ ಮನ್ನಾ ಮಾಡುವಂತೆ ನಮ್ಮ ನಿಯೋಗ ಮೋದಿಯವರ ಬಳಿ ಹೋಗಿ ಕೇಳಿದಾಗ, ನಿಯೋಗದಲ್ಲಿ ರಾಜ್ಯ ಬಿಜೆಪಿ ನಾಯಕರು ಉಸಿರು ಬಿಡಲಿಲ್ಲ. ಆದರೆ ಇಲ್ಲಿ ಯಡಿಯೂರಪ್ಪ ಅವರು ರೈತರ ಮಗ ಎಂದು ಹೇಳಿಕೊಳ್ಳುತ್ತಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೇ ಹಾವೇರಿಯಲ್ಲಿ ಗೋಲಿಬಾರ್ ಮಾಡಿ ರೈತರನ್ನು ಕೊಲೆ ಮಾಡಿಸಿದರು ಎಂದು ಸಿದ್ದರಾಮಯ್ಯ ಆರೋಪಿಸಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮಾತನಾಡಿ, ಮೋದಿಯವರು ಜನರಿಗೆ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. ಅನುದಾನದ ಹಂಚಿಕೆ ವಿಷಯದಲ್ಲಿ ರಾಜ್ಯ ರಾಜ್ಯಗಳ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಕಾಂಗ್ರೆಸ್ ಪರವಾದ ಅಲೆ ಇದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಮುಂದಿನ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ರಾಹುಲ್‍ಗಾಂಧಿಯವರು ದೆಹಲಿಯ ಕೆಂಪು ಕೋಟೆ ಮೇಲೆ ಭಾಷಣ ಮಾಡುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ