ನವದೆಹಲಿ, ಮಾ.7- ಭಾರತ-ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಹೆಚ್ಚುವರಿ ಸೇನಾ ಪಡೆ ಮತ್ತು ಮಿಲಿಟರಿ ಸಾಧನಗಳನ್ನು ಗಡಿ ಬಳಿ ಜಮಾವಣೆ ಮಾಡುತ್ತಿದೆ.
ಆಫ್ಘಾನಿಸ್ತಾನದ ಬೆಂಬಲದಿಂದ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಸೂಕ್ಷ್ಮ ಪ್ರದೇಶಗಳಲ್ಲಿ ತನ್ನ ನೆಲೆಯನ್ನು ಭದ್ರಪಡಿಸಿಕೊಳ್ಳಲು ಪಾಕಿಸ್ತಾನ ಹವಣಿಸುತ್ತಿದೆ ಎಂದು ಉನ್ನತ ಭದ್ರತಾ ಮೂಲಗಳು ತಿಳಿಸಿವೆ.
ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಾಗರಿಕರನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ ಸಂಭಾವ್ಯ ಕದನ ವಿರಾಮ ಉಲ್ಲಂಘಿಸಿ ಅಪ್ರಚೋದಿತ ದಾಳಿ ಮುಂದುವರೆಸುವ ಸಾಧ್ಯತೆಯಿರುವುದರಿಂದ ಭಾರತೀಯ ಸೇನೆ ಪಾಕ್ ವಿರುದ್ಧ ಕಠಿಣ ಎಚ್ಚರಿಕೆ ನೀಡಿದೆ. ಯಾವುದೇ ಪ್ರಚೋದನಾಕಾರಿ ಅಥವಾ ದುಸ್ಸಾಹಸಕ್ಕೆ ಕೈ ಹಾಕಿದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.
ರಜೌರಿ ಜಿಲ್ಲೆಯ ನೌಶೆರಾ ವಲಯದ ಮುಂಚೂಣಿ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ಪಾಕಿಸ್ತಾನ 155 ಮಿಲಿ ಮೀಟರ್ ಫಿರಂಗಿ ಬಂದೂಕು ಸಹಾಯದಿಂದ ದಾಳಿ ನಡೆಸಿದಾಗ ಭಾರತೀಯ ಸೇನೆ ಬೋಪೋಸ್ರ್ಸ್ ಗನ್ಗಳಿಂದ ದಿಟ್ಟ ಪ್ರತ್ಯುತ್ತರ ನೀಡಿದೆ.ಬಳಿಕ ಪಾಕಿಸ್ತಾನಕ್ಕೆ ಭಾರತ ಈ ಎಚ್ಚರಿಕೆ ನೀಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.