ಪ್ರಾಚೀನ ಜಗತ್ತಿನಲ್ಲಿ ನಡೆದ ಅತ್ಯಂತ ಕ್ರೂರ ನರಬಲಿ ಬಗ್ಗೆ ಈಗಲೂ ಮುಂದುವರಿದಿವೆ ಸಂಶೋಧನೆಗಳು

ಎಲ್‍ನಿನೋ(ಪೆರು), ಮಾ.7- ಪ್ರಾಚೀನ ಜಗತ್ತಿನಲ್ಲಿ ನಡೆದ ಅತ್ಯಂತ ಕ್ರೂರ ಮತ್ತು ಅತಿದೊಡ್ಡ ನರಬಲಿ ಪ್ರಕರಣದ ಬಗ್ಗೆ ಈ ಅತ್ಯಾಧುನಿಕ ಕಾಲದಲ್ಲೂ ಸಂಶೋಧನೆಗಳು ಮುಂದುವರಿದಿವೆ. ಕ್ರಿ.ಶ.1450ರಲ್ಲಿ ಈಗಿನ ಪೆರುವಿನ ಪ್ರದೇಶದಲ್ಲಿ 140 ಮಕ್ಕಳು ಮತ್ತು 200 ಎಳೆ ಲಾಮಾ ಪ್ರಾಣಿಗಳ ಎದೆಗಳನ್ನು ಬಗಿದು ಹೃದಯಗಳನ್ನು ಜೀವಂತವಾಗಿ ಕಿತ್ತು ಸಾಮೂಹಿಕ ಹತ್ಯೆ ಮಾಡಲಾಗಿತ್ತು.

ಚೀಮು ಸಂಸ್ಕøತಿಯ ಕಾಲದಲ್ಲಿ ನಡೆದ ಇದನ್ನು ವಿಶ್ವದ ಅತ್ಯಂತ ಭೀಕರ ಮತ್ತು ಅತಿ ದೊಡ್ಡ ಸಾಮೂಹಿಕ ನರಬಲಿ ಎಂದೇ ಬಣ್ಣಿಸಲಾಗಿದೆ. ಆದರೆ ಇದಕ್ಕೆ ಕಾರಣವೇನು? ಮುಗ್ಧ ಮಕ್ಕಳು ಮತ್ತು ಪ್ರಾಣಿಗಳ ಎದೆ ಸೀಳಿ ಹೃದಯ ಬಡಿತವಿದ್ದಾಗಲೇ ಅವುಗಳನ್ನು ಹೊರ ತೆಗೆಯಲು ಕಾರಣವೇನು ಎಂಬುದು ಈಗಲೂ ರಹಸ್ಯವಾಗಿವೆ. ಈ ಬಗ್ಗೆ ಒಂದೊಂದು ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

ಪೆರು ದೇಶದ ಈಗಿರುವ ಎಲ್ ನಿನೋ ಪ್ರದೇಶದಲ್ಲಿ ಕ್ರಿ.ಶ.1450ರಲ್ಲಿ ಈ ಘನಘೋರ ಕೃತ್ಯ ನಡೆದಿತ್ತು. ಆಗ ಈ ಪ್ರಾಂತ್ಯದಲ್ಲಿ ಭಾರೀ ಮಳೆ ಮತ್ತು ಪ್ರವಾಹದಿಂದ ಅಲ್ಲೋಲಕಲ್ಲೋಲ ವಾತಾವರಣ ಸೃಷ್ಟಿಯಾಯಿತು. ಇಂಥ ದುರ್ಘಟನೆ ಮತ್ತೆ ಮರುಕಳಿಸದಂತೆ ತಡೆಯಲು ಚೀಮು ಜನಾಂಗದ ನಾಯಕರು ಮೂಢನಂಬಿಕೆಯಿಂದ ಅತ್ಯಂತ ಕ್ರೂರ, ನಿರ್ದಯ ಮತ್ತು ಅತಿದೊಡ್ಡ ನರಬಲಿ ಪಡೆಯಲು ಕಾರಣವಾಯಿತು ಎಂದು ನ್ಯೂ ಒರೆಲಿನ್ಸ್‍ನ ಟುಲೇನ್ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗದ ಪ್ರೊಫೆಸರ್ ಮತ್ತು ಈ ಅಧ್ಯಯನ ಸಹ ಸಂಶೋಧಕ ಜಾನ್ ವರೆನೋ ತಿಳಿಸಿದ್ದಾರೆ. ಆದರೆ ಇದು ಒಂದು ಊಹೆ.

ನಿಜವಾದ ಕಾರಣವೇ ಬೇರೆ ಇರಬಹುದು ಎಂಬ ಬಗ್ಗೆ ಈಗಲೂ ತನಿಖೆ ಮುಂದುವರಿದಿದೆ.

5 ರಿಂದ 14 ವರ್ಷಗಳ 140 ಗಂಡು ಮತ್ತು ಹೆಣ್ಣು ಮಕ್ಕಳು ಹಾಗೂ 200 ಎಳೆ ಲಾಮಾಗಳ ಎದೆ ಮೂಳೆಗಳನ್ನು ಕತ್ತರಿಸಿ ಮಿಡಿಯುತ್ತಿದ್ದ ಹೃದಯಗಳನ್ನು ಹಾಗೆಯೇ ಕಿತ್ತಿರುವ ಬಗ್ಗೆ ಸಂಶೋಧನೆಗಳಿಂದ ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಇಬ್ಬರು ಮಹಿಳೆಯರು ಮತ್ತು ಒಬ್ಬ ಪುರುಷರ ಹೃದಯಗಳನ್ನು ಇದೇ ರೀತಿ ಕಿತ್ತು ಹೊರತೆಗೆಯಲು ವಿಫಲ ಯತ್ನ ನಡೆದಿರುವುದಕ್ಕೆ ಪುರಾವೆ ಸಹ ಲಭಿಸಿದೆ.

ಮಕ್ಕಳು ಮತ್ತು ಲಾಮಾಗಳನ್ನು ಅತ್ಯಂತ ಭೀಕರವಾಗಿ ಕೊಂದ ನಂತರ ಅದೇ ಪ್ರದೇಶದಲ್ಲಿ ಸಾಮೂಹಿಕವಾಗಿ ಹೂಳಲಾಗಿದೆ. ಅನೇಕ ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಉತ್ಖನನದ ವೇಳೆ ಲಭಿಸಿರುವ ಅಳಿದುಳಿದ ಮೂಳೆಗಳ ಅಧ್ಯಯನದಿಂದ ಈ ಹತ್ಯಾಕಾಂಡ ಬಯಲಿಗೆ ಬಂದಿದೆಯಾದರೂ ಕಾರಣ ಈಗಲೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳು ಈ ಬಗ್ಗೆ ಹಲವಾರು ಕಾರಣಗಳನ್ನು ನೀಡಿವೆಯಾದರೂ ಅವುಗಳು ಖಚಿತಪಟ್ಟಿಲ್ಲ. ಈಗಲೂ ಸಹ ಈ ಪರಮ ನಿಗೂಢತೆ ಬಗ್ಗೆ ಕುತೂಹಲಕಾರಿ ಸಂಶೋಧನೆಗಳು ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ