
ಮೈಸೂರು, ಮಾ.8- ಕಾಂಗ್ರೆಸ್ನ ಟಿಕೆಟ್ಗಾಗಿ ನಾನು ಕೊನೆ ಕ್ಷಣದವರೆಗೂ ಕಾಯುತ್ತೇನೆ ಎಂದು ನಟಿ ಸುಮಲತಾ ಅಂಬರೀಶ್ ಹೇಳಿದ್ದಾರೆ.
ನಗರದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ನಾನು ಟಿಕೆಟ್ ವಿಷಯವಾಗಿ ಯಾರನ್ನೂ ಭೇಟಿ ಮಾಡಿಲ್ಲ. ಒಂದೊಂದು ಹೆಜ್ಜೆ ಇಟ್ಟು ರಾಜಕೀಯಕ್ಕೆ ಬರುತ್ತಿದ್ದೇನೆ. ಪ್ರತಿ ಹೆಜ್ಜೆಯನ್ನೂ ನೋಡಿಕೊಂಡೇ ಇಡುತ್ತೇನೆ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಬರುವುದನ್ನು ತಡೆಯಲು ಆಗುವುದಿಲ್ಲ. ಯಾರಿಗೂ ನೋವಾಗುವಂತಹ ಮಾತುಗಳು ಬೇಡ ಎಂದರು.
ಮಂಡ್ಯದಲ್ಲಿ ನನ್ನನ್ನು ಮನೆ ಸೊಸೆಯಂತೆಯೇ ನೋಡುತ್ತಿದ್ದಾರೆ. ಈವರೆಗೂ ನಾನು ಜನರನ್ನು ಚುನಾವಣೆ ದೃಷ್ಟಿಯಿಂದ ಭೇಟಿ ಮಾಡಿಲ್ಲ.
ಸ್ವಯಂಪ್ರೇರಿತರಾಗಿ ಮಂಡ್ಯದ ಜನತೆ ನನ್ನೊಂದಿಗೆ ಬರುತ್ತಿರುವುದು ಖುಷಿ ತಂದಿದೆ ಎಂದರು.
ಬಿಜೆಪಿ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಇಲ್ಲಿಯವರೆಗೂ ನನ್ನನ್ನು ಭೇಟಿ ಮಾಡಿಲ್ಲ. ನಾನು ಈ ಬಗ್ಗೆ ಜನರ ಬಳಿ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಇದಕ್ಕೂ ಮುನ್ನ ಸುಮಲತಾ ಚಾಮುಂಡಿಬೆಟ್ಟ, ಅರಮನೆ ಬಳಿ ಇರುವ ಗಣಪತಿ ದೇವಸ್ಥಾನ, ಕೋಟೆ ಆಂಜನೇಯ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.