ಕಡೂರು, ಮಾ.8- ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಹುಲ್ಲಿನ ಬಣವೆಗಳಿಗೆ ರಾತ್ರೋರಾತ್ರಿ ಬೆಂಕಿ ಬಿದ್ದು ಸುಟ್ಟು ಭಸ್ಮವಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಕಳೆದ ಫೆ.25ರಂದು ರಾತ್ರಿ ನಾಗಗೊಂಡನಹಳ್ಳಿಯ ರೈತ ಗೋವಿಂದಪ್ಪ ಎಂಬುವವರ ಎರಡು ರಾಗಿ ಹುಲ್ಲಿನ ಬಣವೆಗಳಿಗೆ ಬೆಂಕಿ ತಗುಲಿದಾಗ ಕೂಡಲೇ ಗ್ರಾಮಸ್ಥರು ಕಡೂರಿನ ಅಗ್ನಿಶಾಮಕ ದಳಕ್ಕೆ ತಿಳಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರೂ ಹುಲ್ಲು ಭಾಗಶಃ ಸುಟ್ಟು ಹೋಗಿತ್ತು. ಇದು ಆಕಸ್ಮಿಕ ಘಟನೆ ಇರಬಹುದು ಎಂಬ ಮಾತುಗಳು ವ್ಯಕ್ತವಾದವು.
ಆದರೆ ಮತ್ತೆ ಫೆ.26ರಂದು ಎನ್.ಜಿ.ಈರಪ್ಪ ಎಂಬುವವರಿಗೆ ಸೇರಿದ 4 ಬಣವೆಗಳಿಗೆ ಬೆಂಕಿ ತಗುಲಿದಾಗ ಮತ್ತೆ ಅಗ್ನಿಶಾಮಕದಳದವರು ಬೆಂಕಿ ನಂದಿಸಿದರು. ನಂತರ 27ರಂದು ಮೂರ್ತಪ್ಪ ಮತ್ತು ಮರುಳಪ್ಪ ಎಂಬುವವರ ತಲಾ ಎರಡು ಬಣವೆಗಳು ಬೆಂಕಿಗೆ ಗುರಿಯಾದರೆ 29ರಂದು ರಂಗಪ್ಪ ಎಂಬುವವರ ಒಂದು ಬಣವೆಗೆ ಬೆಂಕಿ ಹೊತ್ತಿಕೊಂಡಿತು. ಒಂದೇ ಗ್ರಾಮದ ಐದು ಜನರ 11 ಹುಲ್ಲಿನ ಬಣವೆಗಳು ಬೆಂಕಿ ಹತ್ತಿಕೊಂಡು ನಾಶವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಸುಮಾರು 80 ಟ್ರಾಕ್ಟರ್ ಲೋಡ್ ಪ್ರಮಾಣದ ಹುಲ್ಲು ಬಹುತೇಕ ಸುಟ್ಟಿದ್ದು, ಅಲ್ಪ ಸ್ವಲ್ಪ ಉಳಿದ ಹುಲ್ಲನ್ನು ದನಗಳು ತಿನ್ನುತ್ತಿಲ್ಲ. ಲಕ್ಷಾಂತರ ರೂಪಾಯಿ ಬೆಲೆಬಾಳುವ ಹುಲ್ಲು ನಾಶವಾಗಿದೆ ಎಂಬುದು ಗ್ರಾಮಸ್ಥರ ಅಳಲಾಗಿದೆ.
ಬೆಂಕಿ ಹೊತ್ತುಕೊಂಡಿದ್ದು ಆಕಸ್ಮಿಕವೇ ಅಥವಾ ಬೇರೆ ಏನಾದರೂ ಕಾರಣವಿರಬಹುದೇ ಎಂಬುದು ಇನ್ನೂ ಪತ್ತೆಯಾಗಿಲ್ಲ. ಗ್ರಾಮಸ್ಥರು ಗ್ರಾಮಕ್ಕೆ ಯಾವುದಾದರೂ ದುಷ್ಟಶಕ್ತಿಗಳ ಕಾಟ ಇರಬಹುದೇ ಎಂದು ತರ್ಕಿಸಿ ಗ್ರಾಮ ದೇವತೆ ಆಂಜನೇಯ ಸ್ವಾಮಿಗೆ ವಿಶೇಷ ಪೂಜೆಯನ್ನು ಮಾಡಿಸಿದ್ದಾರೆ.
ಈ ಕುರಿತು ನಾಗಗೊಂಡನಹಳ್ಳಿ ಗ್ರಾಮಸ್ಥರು ಯಗಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದು, ಈ ರೀತಿಯ ಘಟನೆ ಪುನರಾವರ್ತನೆಯಾಗದಂತೆ ಗ್ರಾಮಕ್ಕೆ ಪೊಲೀಸರನ್ನು ಬೀಡು ಬಿಟ್ಟಿದ್ದಾರೆ.
ಒಟ್ಟಿನಲ್ಲಿ ಜಾನುವಾರುಗಳ ಹುಲ್ಲನ್ನು ಕಳೆದುಕೊಂಡು ನೋವಿನಲ್ಲಿರುವ ನಾಗಗೊಂಡನಹಳ್ಳಿಯ ರೈತರಿಗೆ ಮುಂದೇನೆಂಬಂದು ಆತಂಕದಲ್ಲಿದ್ದಾರೆ.
ಗ್ರಾಮಸ್ಥರ ದೂರಿನ ಮೇರೆಗೆ ಯಗಟಿ ಪೊಲೀಸರು ಇಬ್ಬರನ್ನು ಅನುಮಾನದ ಮೇಲೆ ವಿಚಾರಣೆ ನಡೆಸಿದ್ದು, ಅವರ ವಿಚಾರಣೆ ನಡೆಯುತ್ತಿದ್ದಾಗಲೇ ನಾಗಗೊಂಡನಹಳ್ಳಿಯಲ್ಲಿ ಮತ್ತೊಂದು ಬಣವೆಗೆ ಬೆಂಕಿ ತಗುಲಿದೆ. ಆ ಇಬ್ಬರ ಹೇಳಿಕೆ ಪಡೆದು ಕಳುಹಿಸಲಾಗಿದೆ. ಗ್ರಾಮಕ್ಕೆ ಪೊಲೀಸ್ ಕಾವಲು ಹಾಕಲಾಗಿದೆ ಎಂದು ಪಿಎಸೈ ಈಶ್ವರನಾಯಕ್ ತಿಳಿಸಿದ್ದಾರೆ.