
ತುಮಕೂರು, ಮಾ.8- ಹಾಡಹಗಲೇ ನಡುರಸ್ತೆಯಲ್ಲಿ ಭೀಕರವಾಗಿ ಆಟೋಚಾಲಕನನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ವಿಶೇಷ ಪೊಲೀಸ್ ತಂಡ ಬಂಧಿಸಿದೆ.
ರಾಜೀವ್‍ಗಾಂಧಿ ನಗರದ ಫಯಾಜ್‍ಪಾಷ ಹಾಗೂ ಇರ್ಫಾನ್ ಬಂಧಿತ ಆರೋಪಿಗಳು.
ನಜರ್‍ಬಾದ್ ನಿವಾಸಿ, ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಅಜ್ಗರ್ ಪಾಷ ನಿನ್ನೆ ಬೆಳಗ್ಗೆ ಆಟೋ ಚಾಲನೆ ಮಾಡಿಕೊಂಡು ತುಮಕೂರಿನ ಹೇಮಾವತಿ ಕಚೇರಿ ಎದುರು ಬರುತ್ತಿದ್ದಾಗ ಎದುರಿಗೆ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ರಾಂಗ್‍ಸೈಡ್‍ನಲ್ಲಿ ಬರುತ್ತಿದ್ದೀಯಾ ಎಂದು ಪ್ರಶ್ನಿಸಿ ಜಗಳವಾಡಿದ್ದಾರೆ.
ಈ ವೇಳೆ ನೋಡನೋಡುತ್ತಿದ್ದಂತೆ ಇಬ್ಬರು ವ್ಯಕ್ತಿಗಳು ಅಜ್ಗರ್ ಮೇಲೆ ಮನಬಂದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಕ್ಷಣಾರ್ಧದಲ್ಲಿ ಆತನ ಪ್ರಾಣಪಕ್ಷಿ ಹಾರಿಹೋಗಿತ್ತು.
ಈ ವೇಳೆ ಆರೋಪಿಗಳಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದರಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆಸ್ಪತ್ರೆಗೆ ತೆರಳಿ ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದೆ.
ಒಟ್ಟಾರೆ ನಗರದಲ್ಲಿ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿರುವುದು ನಾಗರಿಕರಲ್ಲಿ ತಲ್ಲಣ ಮೂಡಿಸಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೋನವಂಶಿಕೃಷ್ಣ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ, ಡಿವೈಎಸ್‍ಪಿ ತಿಪ್ಪೆಸ್ವಾಮಿ ಅವರ ಮಾರ್ಗದರ್ಶನದಲ್ಲಿ ಕೊಲೆಯಾದ ಕೆಲವೇ ಗಂಟೆಗಳಲ್ಲಿ ಫೈಯಾಜ್ ಪಾಷ ಹಾಗೂ ಇರ್ಫಾನ್ ಎಂಬುವವರನ್ನು ಪೊಲೀಸ್ ಠಾಣೆ ನಿರೀಕ್ಷಕ ರಾಧಾಕೃಷ್ಣ ಹಾಗೂ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ಲಕ್ಷ್ಮಯ್ಯ, ಜಯನಗರ ಪೊಲೀಸ್ ಠಾಣೆ ಸಬ್‍ಇನ್ಸ್‍ಪೆಕ್ಟರ್ ನವೀನ್ ಹಾಗೂ ಸಿಬ್ಬಂದಿಗಳ ತಂಡ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.