ಗೊಂಬೆ ಹುಲಿ ಕಂಡು ಗ್ರಾಮಕ್ಕೆ ಬರುವದನ್ನು ನಿಲ್ಲಿಸಿದ ಚಿರತೆ

ಮೈಸೂರು, ಮಾ.8- ಕಾಡಿನಿಂದ ಗ್ರಾಮದೊಳಗೆ ನುಗ್ಗಿ ಜನರನ್ನು ಭೀತಿಗೊಳಿಸುತ್ತಿದ್ದುದಲ್ಲದೆ ಹಸು-ಕುರಿಗಳನ್ನು ತಿಂದು ತೇಗುತ್ತಿದ್ದ ಚಿರತೆ ಇದೀಗ ಬೊಂಬೆ ಹುಲಿಗಳನ್ನು ಕಂಡು ಮಾಯವಾಗಿದೆ.

ಬೊಂಬೆ ಹುಲಿಗೆ ಚಿರತೆ ಭಯಗೊಂಡಿರುವುದು ಮಂಡಕಳ್ಳಿ ಸಮೀಪದ ಕೋಡನಹಳ್ಳಿ ಗ್ರಾಮದಲ್ಲಿ. ಚಿರತೆ ಹೆದರಿರುವುದು ನಿಜವಾದ ಹುಲಿಯನ್ನು ಕಂಡು ಅಲ್ಲ, ಈ ಗ್ರಾಮಕ್ಕೆ ಹುಲಿಯೂ ಬಂದಿಲ್ಲ. ಆದರೆ, ಚಿರತೆ ಹೆದರಿರುವುದು ಮಾತ್ರ ಸುಳ್ಳಲ್ಲ.

ಗ್ರಾಮದಲ್ಲಿ ಹಲವಾರು ತಿಂಗಳಿನಿಂದ ಚಿರತೆ ಹಾವಳಿ ಹೆಚ್ಚಾಗಿ ಜಾನುವಾರು ಹಾಗೂ ಕುರಿಗಳನ್ನು ತಿಂದು ಹೋಗುತ್ತಿತ್ತು. ಇದರಿಂದ ಹೆದರಿದ್ದ ಕೋಡನಹಳ್ಳಿ ಗ್ರಾಮಸ್ಥರು ಹಲವು ಬಾರಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಲ್ಲದೆ, ಚಿರತೆ ಹಾವಳಿಯೂ ತಪ್ಪಿರಲಿಲ್ಲ.

ಇದರಿಂದ ಬೇಸತ್ತ ಗ್ರಾಮಸ್ಥರು ಸಂಚು ರೂಪಿಸಿ ಗೊಂಬೆ ಹುಲಿ ತಂದು ಕೆಲವೆಡೆ ಕಟ್ಟಿದ್ದಾರೆ. ಇದನ್ನು ನೋಡಿದ ಚಿರತೆ ಈಗ ಗ್ರಾಮಕ್ಕೆ ಬರುವುದನ್ನು ನಿಲ್ಲಿಸಿರುವುದರಿಂದ ಗ್ರಾಮಸ್ಥರು ನಿಟ್ಟುಸಿರುಬಿಟ್ಟಿದ್ದಾರೆ.

ಒಟ್ಟಾರೆ ಈ ತಂತ್ರದಿಂದಾಗಿ ಚಿರತೆ ಹೆದರಿರುವುದಂತೂ ನಿಜ. ಇದೇ ಪ್ರಯೋಗವನ್ನು ಇನ್ನೂ ಹಲವು ಗ್ರಾಮಗಳಲ್ಲಿ ಮುಂದುವರಿಸಿ ತಮ್ಮ ಮನೆ, ಜಮೀನು ಮುಂಭಾಗ, ಕೊಟ್ಟಿಗೆ ಬಳಿಯೂ ಬೊಂಬೆ ಹುಲಿಯನ್ನು ತಂದು ನಿಲ್ಲಿಸಿರುವುದು ಹಲವೆಡೆ ಕಂಡುಬಂದಿದೆ.

ಚಿರತೆ ಹಾವಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಇದೀಗ ನೆಮ್ಮದಿಯ ಉಸಿರು ಬಿಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ