ಸಿ.ಎಂ. ರಾಜ್ಯದ ಆರೂವರೆ ಕೋಟಿ ಜನರ ರಿಮೋಟ್ ಕಂಟ್ರೋಲ್‍ನಲ್ಲಿದ್ದಾರೆ : ಸಿ.ಎಂ. ಕಾರ್ಯದರ್ಶಿ ಕೋನಾರೆಡ್ಡಿ

ತುಮಕೂರು, ಮಾ.7- ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಆರೂವರೆ ಕೋಟಿ ಜನರ ರಿಮೋಟ್ ಕಂಟ್ರೋಲ್‍ನಲ್ಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ಯಾರ ರಿಮೋಟ್ ಕಂಟ್ರೊಲ್‍ನಲ್ಲೂ ಇಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಕೋನರೆಡ್ಡಿ ಹೇಳಿದರು.

ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 6 ಲಕ್ಷ ರೈತರ ಸಾಲಮನ್ನಾ ಮಾಡಲಾಗಿದೆ.ಇನ್ನು ಮೂರು ದಿನಗಳಲ್ಲಿ 10 ಲಕ್ಷ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಸಾಲಮನ್ನಾ ಮಾಡಿರುವ ಋಣಮುಕ್ತ ಪತ್ರ ನೀಡಲಾಗುತ್ತದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸರಿಯಾದ ಅಂಕಿ-ಅಂಶ ತಿಳಿದು ಮಾತನಾಡಬೇಕಿತ್ತು.ಇನ್ನಾದರೂ ಸರಿಯಾದ ಮಾಹಿತಿ ಪಡೆಯಲಿ. ಆಗ ಅವರ ಸ್ಥಾನಕ್ಕೆ ಗೌರವ ಸಿಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗುಲ್ಬರ್ಗ ಸಮಾವೇಶದಲ್ಲಿ ಮಹಾದಾಯಿ ವಿಚಾರವಾಗಿ ಯಾವುದೇ ಪ್ರಸ್ತಾಪ ಮಾಡಿಲ್ಲ. ಮಹದಾಯಿ ತೀರ್ಪು ಬಂದು ಐದು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿಲ್ಲ. ಬಿಜೆಪಿಯ ಯಾವ ಸಂಸದರೂ ಪ್ರಧಾನಮಂತ್ರಿಗಳ ಗಮನಕ್ಕೆ ತರಲು ವಿಫಲರಾಗಿದ್ದಾರೆ ಎಂದರು.

ಬರ ನಿರ್ವಹಣೆಗೆ ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ಹಣ ಕೊಡುತ್ತಾರೆ. ಕರ್ನಾಟಕಕ್ಕೆ ಕೇವಲ 900 ಕೋಟಿ ಹಣ ಕೊಡುವ ಮೂಲಕ ತಾರತಮ್ಯ ಮಾಡಿದ್ದಾರೆ ಎಂದು ಆರೋಪಿಸಿದರು.

ಕುಮಾರಸ್ವಾಮಿ ಅವರ ಪುತ್ರ ನಿಖಿಲ್‍ಗೌಡ ಅವರು ಈಗಾಗಲೇ ಮಂಡ್ಯ ಕ್ಷೇತ್ರಕ್ಕೆ ಘೋಷಿತ ಅಭ್ಯರ್ಥಿಯಾಗಿದ್ದಾರೆ.ಸಚಿವರಾದ ಸಾ.ರಾ.ಮಹೇಶ್, ಪುಟ್ಟರಾಜು, ಪಕ್ಷದ ಕಾರ್ಯಕರ್ತರು ಎಲ್ಲರೂ ಸೇರಿ ಸಭೆ ನಡೆಸಿದ ನಂತರ ನಿಖಿಲ್‍ಗೌಡ ಹೆಸರನ್ನು ಅಂತಿಮಗೊಳಿಸಿದ ನಂತರವೇ ಘೋಷಣೆ ಮಾಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಕೂಡ ಸಂಪೂರ್ಣ ಬೆಂಬಲ ನೀಡಿದೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು.ಅದೇ ರೀತಿ ಸುಮಲತಾ ಅವರು ಆಕಾಂಕ್ಷಿಯಾಗಿದ್ದಾರೆ. ಚಿತ್ರರಂಗ ಅವರ ಬೆಂಬಲಕ್ಕೆ ನಿಂತಿರಬಹುದು. ಅದಕ್ಕೆ ನಾನೇನೂ ಹೇಳಲು ಆಗುವುದಿಲ್ಲ ಎಂದರು.

ಮಾಜಿ ಸಚಿವರಾದ ಶ್ರೀನಿವಾಸ ಪ್ರಸಾದ್ ಅವರು ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದ ಅವರು, ಶ್ರೀನಿವಾಸ ಪ್ರಸಾದ್ ಅವರು ಗೌಡರ ಬಗ್ಗೆ ಅಪಾರ ಗೌರವ ಇಟ್ಟುಕೊಂಡವರು. ಏಕೆ ಹೀಗೆ ಮಾತನಾಡಿದ್ದಾರೆಂಬುದು ಗೊತ್ತಿಲ್ಲ. ಕರ್ನಾಟಕದಿಂದ ಪ್ರಧಾನಮಂತ್ರಿಗಳಾದವರು ಯಾರಿದ್ದಾರೆ.

ಕರ್ನಾಟಕವೆಂದರೆ ದೇವೇಗೌಡರು, ದೇವೇಗೌಡರೆಂದರೆ ಕರ್ನಾಟಕ. ಅದರಲ್ಲಿ ತಪ್ಪೇನಿದೆ ಎಂದು ಹೇಳಿದರು.

ದೇವೇಗೌಡರ ಕುಟುಂಬದ ಬಗ್ಗೆ ಶಾಸಕ ಪ್ರೀತಮ್‍ಗೌಡ ಅವಹೇಳನಕಾರಿಯಾಗಿ ಮಾತನಾಡಿರುವುದನ್ನು ನಾವು ಸಹಿಸುವುದಿಲ್ಲ. ಪ್ರೀತಮ್ ಅವರು ಮೊದಲು ಬಿಜೆಪಿಯವರ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲಿ. ಅವರಿಗೆ ರಾಜಕೀಯ ಅನುಭವದ ಕೊರತೆ ಇದೆ ಎಂದು ತಿಳಿಸಿದರು.

ಕೆಪಿಎಸ್‍ಸಿ ನೇಮಕ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಈಗಾಗಲೇ 360ಕ್ಕೂ ಹೆಚ್ಚು ನೌಕರರಿಗೆ ತೊಂದರೆಯಾಗಿದೆ. ಅವರ ಹಿತ ಕಾಪಾಡುವಲ್ಲಿ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷ ರಾಜ್ಯದಲ್ಲಿ ಒಟ್ಟಾಗಿ ಮೈತ್ರಿ ಸರ್ಕಾರ ನಡೆಸುತ್ತಿದೆ.ಕೋಮುವಾದಿ ಬಿಜೆಪಿ ಪಕ್ಷವನ್ನು ದೂರವಿಡುವ ಹಿನ್ನೆಲೆಯಲ್ಲಿ ಲೋಕಸಭೆ ಚುನಾವಣೆಯಲ್ಲೂ ಕೂಡ ಕ್ಷೇತ್ರಗಳ ಹಂಚಿಕೆ ಬಗ್ಗೆ ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡರು, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಚರ್ಚಿಸಿದ್ದಾರೆ.12 ಸ್ಥಾನ ಬಿಟ್ಟುಕೊಡುವಂತೆ ಮನವಿ ಮಾಡಿದ್ದೇವೆ. ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ 12 ಕ್ಷೇತ್ರಗಳನ್ನು ಕೇಳಿದ್ದೇವೆ. ತುಮಕೂರು ಲೋಕಸಭಾ ಕ್ಷೇತ್ರ ಜೆಡಿಎಸ್‍ನ ಭದ್ರಕೋಟೆಯಾಗಿದೆ.ಇನ್ನೆರಡು-ಮೂರು ದಿನಗಳಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಗೆ ತೆರೆ ಬೀಳಲಿದೆ ಎಂದರು.

ನಾನು ಶ್ರೀಮಠದ ಭಕ್ತ.ಮಹದಾಯಿ ಹೋರಾಟ ಸೇರಿದಂತೆ ಹಲವಾರು ಹೋರಾಟಗಳಲ್ಲಿ ನಮಗೆ ಪ್ರೇರಣೆ ನೀಡಿದ ಮಠ. ಹೋರಾಟದ ಸಂದರ್ಭದಲ್ಲಿ 10 ಸಾವಿರದಿಂದ ಹಿಡಿದು 50 ಸಾವಿರ ಹೋರಾಟಗಾರರಿಗೆ ದಾಸೋಹ ಮಾಡಿದ ಮಹಾನ್ ಕ್ಷೇತ್ರ. ಅದಕ್ಕಾಗಿ ಆಶೀರ್ವಾದ ಪಡೆಯಲು ಇಲ್ಲಿ ಬಂದಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ