ದೇವೇಗೌಡರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ-ಸಚಿವ ಎಚ್.ಡಿ.ರೇವಣ್ಣ

ಹಾಸನ, ಮಾ.7- ದೇವೇಗೌಡರ ಸಾಧನೆ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರಿಗೆ ಸಚಿವ ಎಚ್.ಡಿ.ರೇವಣ್ಣ ಪಂಥಾಹ್ವಾನ ನೀಡಿದ್ದಾರೆ.

ಹಾಸನದ ಹೊಳೆನರಸೀಪುರ ತಾಲೂಕಿನ ಕಳ್ಳಿಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ದೇವೇಗೌಡರನ್ನು ಲಘುವಾಗಿ ಟೀಕಿಸಿದ ಕಾರಣಕ್ಕೆ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

ದೇವೇಗೌಡರು ದೆಹಲಿ-ಬೆಂಗಳೂರಿಗೆ ಓಡಾಡಿಕೊಂಡಿಲ್ಲ. ಅವರು ಏನು ಕೆಲಸ ಮಾಡಿದ್ದಾರೆ ಎಂಬುದು ಚರ್ಚೆಯಾಗಲಿ. ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದರು.

17 ಮಂದಿ ಬಿಜೆಪಿ ಸಂಸದರಿದ್ದರೂ ಕಾವೇರಿ, ಮಹದಾಯಿ ಬಗ್ಗೆ ಹೋರಾಟ ಮಾಡಲಿಲ್ಲ. ಈಗ ಟಿವಿ ಮುಂದೆ ದೇವೇಗೌಡರನ್ನು ಟೀಕೆ ಮಾಡುತ್ತಾರೆ ಎಂದು ಕಿಡಿಕಾರಿದರು.

ದೇವೇಗೌಡರ ಕುಟುಂಬದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಪ್ರೀತಮ್‍ಗೌಡ ವಿರುದ್ಧ ಹರಿಹಾಯ್ದ ರೇವಣ್ಣ, ಅಚಾನಕ್ಕಾಗಿ ಶಾಸಕರಾದರೆ ಹೀಗೆ ಮಾತನಾಡುತ್ತಾರೆ. ಈ ಬಾರಿ ಬಿಜೆಪಿಗೆ ಜನ ಬುದ್ಧಿ ಕಲಿಸುತ್ತಾರೆ. ಶಿವಮೊಗ್ಗವನ್ನು ಯಡಿಯೂರಪ್ಪ ಅವರ ಮಕ್ಕಳಿಗೆ ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.

ಬಿಜೆಪಿ ಮುಖಂಡರು ಮನಸ್ಸಿಗೆ ಬಂದಂತೆ ಮಾತನಾಡುವುದನ್ನು ಮೊದಲು ನಿಲ್ಲಿಸಲಿ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ