
ಬೇಲೂರು, ಮಾ.7- ಚಾಲಕನ ನಿಯಂತ್ರಣ ತಪ್ಪಿ ಬೈಕ್ ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟು, ಮತ್ತೊಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬಿಕ್ಕೋಡು ಸಮೀಪದ ಹೊನ್ನೆಮನೆ ಸಮೀಪ ನಡೆದಿದೆ.
ರಂಗಯ್ಯ (46) ಎಂಬುವವರೆ ಬೈಕ್ ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದು, ಅವರ ಪತ್ನಿ ಹಾಲಮ್ಮ (42) ಸ್ಥಿತಿ ಚಿಂತಾಜನಕವಾಗಿದೆ.
ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ದೊಡ್ಡಿಹಳ್ಳಿ ಗ್ರಾಮದ ರಂಗಯ್ಯ ಬಿಕ್ಕೋಡಿನಲ್ಲಿರುವ ಸಂಬಂಧಿಕರ ಮನೆಯಲ್ಲಿನ ಹಬ್ಬಕ್ಕೆಂದು ಹೋಗಿ, ದೊಡ್ಡಿಹಳ್ಳಿ ಗ್ರಾಮಕ್ಕೆ ತೆರಳಲು ಬೈಕ್ನಲ್ಲಿ ಪತ್ನಿಯೊಂದಿಗೆ ಬರುತ್ತಿದ್ದಾಗ ಬಿಕ್ಕೋಡು ಸಮೀಪದ ಹೊನ್ನೆಮನೆ ಗ್ರಾಮದ ಬಳಿ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಗುದ್ದಿದ್ದಾರೆ.
ಬೈಕ್ ಗುದ್ದಿದ ರಭಸಕ್ಕೆ ರಂಗಯ್ಯ ಸ್ಥಳದಲ್ಲೆ ಮೃತರಾದರೆ, ಪತ್ನಿ ಹಾಲಮ್ಮರಿಗೆ ಹೆಚ್ಚಿನ ಗಾಯಗಳಾಗಿ ಅವರ ಸ್ಥಿತಿ ಚಿಂತಾಜನಕವಾಗಿದೆ. ತಕ್ಷಣವೆ ಹಾಲಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಾಸನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಸ್ಥಳಕ್ಕೆ ಅರೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.