ಬೆಂಗಳೂರು, ಮಾ.7- ನಗರದ ವಿವಿಧ ಕಡೆ ಬೈಕ್ಗಳಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ ಅವರ ಸರಗಳನ್ನು ಎಗರಿಸುತ್ತಿದ್ದ ತಮಿಳುನಾಡು ರಾಜ್ಯದ ಇಬ್ಬರು ಸರಗಳ್ಳರನ್ನು ಹಾಗೂ ಕದ್ದ ಮಾಲನ್ನು ಸ್ವೀಕರಿಸುತ್ತಿದ್ದ ವ್ಯಕ್ತಿಯನ್ನು ಸಹ ಕೆಂಪೇಗೌಡ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಅರುಣ್ಕುಮಾರ್ (33) ಮತ್ತು ಕಾರ್ತಿಕ್ (30) ಬಂಧಿತ ಸರಗಳ್ಳರಾಗಿದ್ದು, ಇವರಿಂದ 1ಕೆಜಿ 220 ಗ್ರಾಂ ತೂಕದ ಚಿನ್ನದ ಸರಗಳು, ಕೃತ್ಯಕ್ಕೆ ಬಳಸಿದ್ದ ಎರಡು ಬಜಾಜ್ ಪಲ್ಸರ್ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಅರುಣ್ಕುಮಾರ್ ಮತ್ತಿಕೆರೆಯ ಗೋಕುಲ ಸ್ಟ್ರೀಟ್ನಲ್ಲಿ ವಾಸವಾಗಿದ್ದರೆ, ಕಾರ್ತಿಕ್ ಸರ್ಜಾಪುರದಲ್ಲಿ ವಾಸವಾಗಿದ್ದನು. ಇವರಿಬ್ಬರು ಮೂಲತಃ ತಮಿಳುನಾಡಿನವರಾಗಿದ್ದು, ನಗರದಲ್ಲಿ ಎರಡು ಬಜಾಜ್ ಪಲ್ಸರ್ ಬೈಕ್ಗಳನ್ನು ಕಳ್ಳತನ ಮಾಡಿ ಆ ಬೈಕ್ಗಳ ನಂಬರ್ ಪ್ಲೇಟ್ ಬದಲಿಸಿ ಒಂದು ಬೈಕ್ಅನ್ನು ತಮಿಳುನಾಡಿನಲ್ಲಿ ಮತ್ತೊಂದು ಬೈಕ್ಅನ್ನು ಬೆಂಗಳೂರಿನಲ್ಲಿ ಸರಗಳ್ಳತನ ಮಾಡಲು ಉಪಯೋಗಿಸುತ್ತಿದ್ದರು.
ಇವರಿಬ್ಬರು ಬೈಕ್ನಲ್ಲಿ ಸುತ್ತಾಡುತ್ತ ಒಂಟಿಯಾಗಿ ಓಡಾಡುವ ಮಹಿಳೆಯರಿಗೆ ಚಾಕು ತೋರಿಸಿ ಬೆದರಿಸಿ ಅವರ ಸರಗಳನ್ನು ಕಸಿದುಕೊಂಡು ಅಲ್ಲಿಂದ ಪರಾರಿಯಾಗಿ ದೊಡ್ಡಬೊಮ್ಮಸಂದ್ರದ ಚೌಡೇಶ್ವರಿ ಲೇಔಟ್ನಲ್ಲಿ ವಾಸವಿರುವ ಸ್ನೇಹಿತ ಜಯಕುಮಾರ್ (32) ಗೆ ಕೊಟ್ಟಿದ್ದರು.
ಜಯಕುಮಾರ್ ಪತ್ನಿ ಮೂಲಕ ಚಿನ್ನದ ಒಡವೆಗಳನ್ನು ವಿಲೇವಾರಿ ಮಾಡಿದ್ದನು. ಆರೋಪಿಗಳ ಬಂಧನದಿಂದ ಎರಡೂ ರಾಜ್ಯಗಳ ಸುಮಾರು 40 ಲಕ್ಷ ರೂ. ಬೆಲೆಬಾಳುವ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ಬಂಧನದಿಂದ ಒಟ್ಟು 35 ಸರಗಳ್ಳತನ ಮತ್ತು ಎರಡು ವಾಹನ ಕಳವು ಸೇರಿ ಒಟ್ಟು 37 ಪ್ರಕರಣಗಳು ಪತ್ತೆಯಾಗಿವೆ.
ಪತ್ತೆ ಕಾರ್ಯವನ್ನು ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ವಿವಿ ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಾಲಿಬಾಷ ಅವರ ನೇತೃತ್ವದಲ್ಲಿ ಕೆಂಪೇಗೌಡ ನಗರ ಠಾಣೆ ಇನ್ಸ್ಪೆಕ್ಟರ್ ಉದಯರವಿ ಅವರನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸಿ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.