ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರ ಬಂಧನ

ಬೆಂಗಳೂರು, ಮಾ.7- ನಗರದ ವಿವಿಧ ಕಡೆಗಳಲ್ಲಿ ರಾತ್ರಿ ಮತ್ತು ಹಗಲು ವೇಳೆ ದುಬಾರಿ ಬೆಲೆ ಬಾಳುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ವಿವಿ ಪುರಂ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ರೂ. ಬೆಲೆಬಾಳುವ 8 ರಾಯಲ್ ಎನ್‍ಫೀಲ್ಡ್ ಬುಲೆಟ್‍ಗಳು ಸೇರಿದಂತೆ 17 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ತಮಿಳುನಾಡು ಮೂಲದ ಮುನೀರ್‍ಬಾಷ (20), ಮಹಮ್ಮದ್ ಮುಜಾಹಿದ್ (25) ಮತ್ತು ಮೋಗನ್ (19) ಬಂಧಿತ ಆರೋಪಿಗಳಾಗಿದ್ದು, ಇವರಿಂದ 8 ರಾಯಲ್ ಎನ್‍ಫೀಲ್ಡ್ ಬುಲೆಟ್‍ಗಳು, ಬಜಾಜ್ ಪಲ್ಸರ್, ಯಮಹ, ಹೊಂಡಾ ಡಿಯೋ, ಯಮಹ ಆರ್‍ಎಕ್ಸ್ ಸೇರಿದಂತೆ 17 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

ವಿವಿ ಪುರಂ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ಆರೋಪಿಗಳ ಪತ್ತೆಗಾಗಿ ವಿವಿ ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ಅವರ ಅಪರಾಧ ಪತ್ತೆದಳ ಮತ್ತು ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿದ್ದಾಗ ಅನುಮಾನಾಸ್ಪದವಾಗಿ ರಾಯಲ್ ಎನ್‍ಫೀಲ್ಡ್ ಬೈಕ್‍ನಲ್ಲಿ ಬರುತ್ತಿದ್ದ ಇಬ್ಬರನ್ನು ತಡೆದು ವಿಚಾರಿಸಿದಾಗ ಒಬ್ಬ ವ್ಯಕ್ತಿ ತಪ್ಪಿಸಿಕೊಂಡಿದ್ದನು. ಸೆರೆ ಸಿಕ್ಕ ಆರೋಪಿ ಮುನೀರ್ ಬಾಷನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಬೈಕ್‍ಗಳನ್ನು ಕಳ್ಳತನ ಮಾಡಿ ಅವುಗಳ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡಿನಲ್ಲಿ ಮಾರಾಟ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ.

ಈತನ ಹೇಳಿಕೆ ಮೇರೆಗೆ ಇನ್ನಿಬ್ಬರು ಆರೋಪಿಗಳನ್ನು ಬಂಧಿಸಿದ್ದು, ಇವರ ಸೆರೆಯಿಂದ ಬ್ಯಾಟರಾಯನಪುರ, ಜಯನಗರ, ಅಶೋಕನಗರ, ಹೆಬ್ಬಗೋಡಿ, ಬಂಡೆಪಾಳ್ಯ, ವಿಲ್ಸನ್ ಗಾರ್ಡನ್, ತಮಿಳುನಾಡಿನ ಶ್ರೀ ಪೆರಂಬೂರು, ಹೊಸೂರು, ವೆಲ್ಲೂರು ಕಡೆಗಳಲ್ಲಿ ನಡೆದಿದ್ದ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.

ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಅಣ್ಣಾಮಲೈ ಅವರ ಮಾರ್ಗದರ್ಶನದಲ್ಲಿ ವಿವಿ ಪುರಂ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ವಾಲಿಬಾಷ ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಶಿವಶಂಕರ್ ಅವರನ್ನೊಳಗೊಂಡ ತಂಡ ಈ ಕಾರ್ಯಾಚರಣೆ ನಡೆಸಿತ್ತು.

ಈ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿರುವ ತಮಿಳುನಾಡಿನ ಆರೋಪಿಗಳಾದ ಜುಲ್ಫಿಕರ್ ಆಲಿ, ಮಣಿ, ಚಿನ್ನರಾಸ, ಫೈಜಾನ್ ಹಾಗೂ ವಾಹಿದ್ ಪತ್ತೆಗಾಗಿ ತನಿಖೆ ಮುಂದುವರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ