ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ:ಸಚಿವ ಶಿವಶಂಕರರೆಡ್ಡಿ

ಬೆಂಗಳೂರು, ಮಾ.6- ರಾಜ್ಯದ ರೈತರ 45 ಸಾವಿರ ಕೋಟಿ ರೂ. ಸಾಲಮನ್ನಾ, ಎರಡೂವರೆ ಲಕ್ಷ ಕೃಷಿ ಹೊಂಡಗಳ ನಿರ್ಮಾಣ ಸೇರಿದಂತೆ ಹಲವು ಕಾರ್ಯಕ್ರಮಗಳ ಮೂಲಕ ಸರ್ಕಾರ ಅನ್ನದಾತನ ನೆರವಿಗೆ ದಾವಿಸಿದೆ ಎಂದು ಕೃಷಿ ಸಚಿವ ಶಿವಶಂಕರರೆಡ್ಡಿ ಇಂದಿಲ್ಲಿ ಹೇಳಿದರು.

ಬ್ಯಾಂಕ್ವೆಟ್ ಹಾಲ್‍ನಲ್ಲಿಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೃಷಿ ಪಂಡಿತ್ ಮತ್ತು ಕೃಷಿ ಪ್ರಶಸ್ತಿಗಳನ್ನು ವಿತರಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಹಕಾರ ಬ್ಯಾಂಕ್, ವಾಣಿಜ್ಯ ಬ್ಯಾಂಕ್‍ಗಳ ರೈತರ ಸಾಲಮನ್ನಾ ಮಾಡುವ ಮೂಲಕ ಅವರನ್ನು ಋಣಮುಕ್ತರನ್ನಾಗಿ ಮಾಡಲಾಗಿದೆ. ಕಳೆದೆರಡು ವರ್ಷಗಳಲ್ಲಿ 25 ಸಾವಿರ ಕೋಟಿ ರೂ. ಸಾಲಮನ್ನಾಕ್ಕೆ ಮೀಸಲಿಡಲಾಗಿದೆ. ಸಹಕಾರಿ ಬ್ಯಾಂಕ್‍ಗಳ ಸಾಲಮನ್ನಾವನ್ನು ಜೂ.2019ರೊಳಗೆ, ವಾಣಿಜ್ಯ ಬ್ಯಾಂಕ್‍ಗಳ ಸಾಲಮನ್ನಾವನ್ನು 2019-20ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ. ಇನ್ನುಳಿದಂತೆ ಹಂತ ಹಂತವಾಗಿ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಹೇಳಿದರು.

ಸರ್ಕಾರ ಈ ಬಾರಿಯ ಬಜೆಟ್‍ನಲ್ಲಿ ಕೃಷಿ, ಹೈನುಗಾರಿಕೆ, ತೋಟಗಾರಿಕೆ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿದೆ ಎಂದು ತಿಳಿಸಿದರು. ಕೃಷಿ ಪಂಡಿತ್ ಮತ್ತು ಕೃಷಿ ಪ್ರಶಸ್ತಿಗೆ ಆಯ್ಕೆಯಾದ 21 ಜನ ರೈತರಿಗೆ ಪ್ರಶಸ್ತಿ ವಿತರಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳೇ ಆಗಮಿಸಬೇಕೆಂದು ಪ್ರಶಸ್ತಿ ಪುರಸ್ಕøತರು ಮತ್ತು ರೈತರು ಪಟ್ಟು ಹಿಡಿದಿದ್ದರಿಂದ ಕಾರ್ಯಕ್ರಮ ಕೊಂಚ ವಿಳಂಬವಾಯಿತು.

ಕಾರ್ಯಕ್ರಮದಲ್ಲಿ ಕೃಷಿ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್, ಕೃಷಿ ವಿವಿ ಕುಲಪತಿ ರಾಜೇಂದ್ರ ಪ್ರಸಾದ್, ಧಾರವಾಡ ಕೃಷಿ ವಿವಿ ಕುಲಪತಿ ಎಂ.ವಿ.ಶೆಟ್ಟಿ, ನಿರ್ದೇಶಕ ಬಿ.ವೈ.ಶ್ರೀನಿವಾಸ್ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ