ಕಾಂಗ್ರೇಸ್ ಪಕ್ಷದಲ್ಲಿ ಅಸಮಾಧಾನವಿದೆ-ಪಕ್ಷ ಬಿಡುವುದಿಲ್ಲ-ಶಾಸಕ ರಮೇಶ್ ಜಾರಕಿಹೊಳಿ

ಬೆಂಗಳೂರು, ಮಾ.6- ಇಂದು ತಮ್ಮ ನಿವಾಸಕ್ಕೆ ಆಗಮಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು, ನನ್ನ ಅಸಮಾಧಾನಕ್ಕೆ ನಾನೇ ಕಾರಣ. ಈ ಸಂದರ್ಭದಲ್ಲಿ ಏನೂ ಹೇಳುವುದಿಲ್ಲ. ಕಾಂಗ್ರೆಸ್ ಬಗ್ಗೆ ಇರುವ ಅಸಮಾಧಾನದ ಬಗ್ಗೆ ಹೈಕಮಾಂಡ್‍ಗೆ ತಿಳಿಸಿದ್ದೇವೆ. ಹೈಕಮಾಂಡ್ ಕಡೆಯಿಂದ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಹೇಳಿದರು.

ದೇವೇಗೌಡರ ಕುಟುಂಬ ಹಾಗೂ ನನ್ನ ಸಂಬಂಧ ತುಂಬ ಹಳೆಯದು. ಹಲವಾರು ವಿಚಾರಗಳಲ್ಲಿ ಎರಡು-ಮೂರು ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭೇಟಿ ಮಾಡಿದ್ದಾರೆ. ನಾನು ಪಕ್ಷ ತೊರೆಯುವುದಿಲ್ಲ ಎಂದು ಹೇಳಿದರು.

ಶಾಸಕ ಬಿ.ನಾಗೇಂದ್ರ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ಉಪಹಾರಕ್ಕೆ ಬಂದಿದ್ದರು. ನನಗೂ ಆಹ್ವಾನ ನೀಡಿದ್ದರು. ನಮ್ಮ ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಿದೆ. ಬೇರೆ ಯಾವ ವಿಚಾರವೂ ಚರ್ಚೆಯಾಗಿಲ್ಲ. ನನ್ನ ಸೋದರನನ್ನು ಬಿಜೆಪಿ ಲೋಕಸಭೆ ಅಭ್ಯರ್ಥಿ ಮಾಡುವ ವಿಚಾರದಲ್ಲಿ ನನ್ನ ಸೋದರ ಸ್ವತಂತ್ರರಾಗಿದ್ದಾರೆ. ಅವರ ತೀರ್ಮಾನ ನನಗೆ ಗೊತ್ತಿಲ್ಲ. ಅವರ ಜತೆ ಯಾರೋ ಮಾತನಾಡಿರಬಹುದು. ಅವರು ಪಕ್ಷ ಬಿಟ್ಟರೆ ನಾನು ಅವರ ಜತೆ ಇರುವುದಿಲ್ಲ. ನಾನು ಬಳ್ಳಾರಿ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ನನಗೆ ಟಿಕೆಟ್ ಕೊಡಲಿಲ್ಲ. ನಾನು ಕಾಂಗ್ರೆಸ್‍ನಲ್ಲಿದ್ದೇನೆ ಎಂದು ಹೇಳಿದರು.

ಪಕ್ಷದ ಜತೆ ಅಸಮಾಧಾನವಿದೆ, ಅತೃಪ್ತಿ ಇಲ್ಲ. ಮುಖ್ಯಮಂತ್ರಿಯವರು ಬೆಳಗಾವಿ, ಬಳ್ಳಾರಿ ಜಿಲ್ಲೆಗಳ ಸಮಸ್ಯೆಗೆ ನಾನೇ ಖುದ್ದಾಗಿ ಸ್ಪಂದನೆ ಮಾಡುತ್ತೇನೆ ಎಂದು ಹೇಳಿದ್ದಾರೆ. ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸವಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ