ಉಗ್ರರು ಪಾತಾಳದಲ್ಲೇ ಅಡಗಿದ್ದರೂ ಬಿಡುವ ಪ್ರಶ್ನೆ ಇಲ್ಲ: ಪ್ರಧಾನಿ ಮೋದಿ

ಅಹ್ಮದಾಬಾದ್: ಪ್ರಧಾನಿ ಮೋದಿ ಅವರು ಉಗ್ರರ ದಮನ ಮಾಡುವ ಪಣ ತೊಟ್ಟಿದ್ದಾರೆ. ಇಲ್ಲಿಯ ಸರಕಾರಿ ಆಸ್ಪತ್ರೆಯೊಂದರ ಉದ್ಘಾಟನೆ ವೇಳೆ ಮಾತನಾಡಿದ ಮೋದಿ, ಉಗ್ರರನ್ನು ಎಲ್ಲೇ ಅಡಗಿದ್ದರೂ ಹುಟ್ಟಡಗಿಸದೇ ಬಿಡುವುದಿಲ್ಲ ಎಂದು ಹೇಳಿದ್ದಾರೆಂದು ಎಎನ್​ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. “ಚುನ್-ಚುನ್ ಕೇ ಹಿಸಾಬ್ ಲೇನಾ ಯೇ ಮೇರಿ ಫಿತ್​ರತ್ ಹೈ… ವೋ ಅಗರ್ ಸಾತ್ವೇ ಪಾತಾಳ್ ಮೇಂ ಭೀ ಚುಪೇ ಹೋ, ತೋಹ್ ಕೀಂಚ್ ಕರ್ ನಿಕಾಲ್ ಕರ್ ಮಾರೂಂಗಾ (ಒಂದೊಂದು ಏಟಿಗೂ ತಿರುಗೇಟು ಕೊಡುವುದು ನನ್ನ ಜಾಯಮಾನ. ಉಗ್ರರು ಏಳನೇ ಪಾತಾಳದಲ್ಲೇ ಅಡಗಿರಲಿ ಅವರನ್ನು ಹುಡುಗಿ ಎಳೆದು ಹೊಡೆದುಹಾಕುತ್ತೇನೆ” ಎಂದು ಉಗ್ರರ ವಿರುದ್ಧ ಪ್ರಧಾನಿ ಮೋದಿ ಸಿಡಿದಿದ್ದಾರೆ.

ವೈರಿಗಳನ್ನು ಅವರದ್ದೇ ನೆಲದಲ್ಲಿ ಹೊಡೆಯುವುದು ನಮ್ಮ ನೀತಿ. ಹೆಚ್ಚು ಕಾಲ ನಾನು ತಾಳ್ಮೆಯಿಂದ ಇರಲು ಇಷ್ಟಪಡುವುದಿಲ್ಲ. ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ನಮ್ಮ ಸೇನೆ ನೀಡುವ ಸಲಹೆಗಳನ್ನು ತಾನು ಪಾಲಿಸುತ್ತೇನೆ ಎಂದು ಮೋದಿ ತಿಳಿಸಿದ್ದಾರೆ.

ಪುಲ್ವಾಮ ಉಗ್ರ ದಾಳಿಯ ಬೆನ್ನಲ್ಲೇ ಭಾರತೀಯ ವಾಯುಪಡೆಯು ಜೆಟ್ ವಿಮಾನಗಳು ಪಾಕಿಸ್ತಾನದ ಬಾಲಾಕೋಟ್​ವರೆಗೂ ಹೋಗಿ ಬಾಂಬ್ ಹಾಕಿ ಬಂದವು.

ಜೈಷ್ ಉಗ್ರರ ಕ್ಯಾಂಪ್ ಮೇಲೆ ದಾಳಿ ಮಾಡಿದ್ದಾಗಿ ಭಾರತೀಯ ಸೇನೆ ಹೇಳಿದೆ. ಸುಮಾರು 250-350 ಉಗ್ರರು ಈ ದಾಳಿಯಲ್ಲಿ ಸತ್ತಿರಬಹುದೆಂಬ ಅಂದಾಜನ್ನು ಸರಕಾರದ ಮೂಲಗಳು ತಿಳಿಸಿವೆ. ಆದರೆ, ಒಬ್ಬನೇ ವ್ಯಕ್ತಿಯೂ ಈ ದಾಳಿಯಲ್ಲಿ ಸತ್ತಿಲ್ಲ. ಕೇವಲ ಗಿಡಮರಗಳು ಬುಡಮೇಲುಗೊಂಡಿವೆ ಎಂಬುದು ಪಾಕ್ ವಾದ.

ಭಾರತದ ವಿಪಕ್ಷಗಳು ಕೂಡ ಇವೇ ಆರೋಪ ಮಾಡುತ್ತಿವೆ. ಬಾಲಾಕೋಟ್ ದಾಳಿಯಲ್ಲಿ ಉಗ್ರರು ಸತ್ತಿರುವುದು ನಿಜವಾ ಎಂದು ಈ ಪಕ್ಷಗಳು ಸಂದೇಹ ವ್ಯಕ್ತಪಡಿಸಿವೆ.

ಈ ಹಿನ್ನೆಲೆಯಲ್ಲಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ, ವಿಪಕ್ಷಗಳ ಈ ಹೇಳಿಕೆಗಳು ಪಾಕಿಸ್ತಾನದ ಮಾಧ್ಯಮಗಳಲ್ಲಿ ಹೆಡ್​ಲೈನ್ ಆಗುತ್ತಿವೆ. ಅಲ್ಲಿಯ ಸಂಸತ್​ನಲ್ಲಿ ಶ್ಲಾಘನೆಗೊಳಗಾಗುತ್ತಿವೆ ಎಂದು ಟೀಕಿಸಿದ್ದಾರೆ.

“ರಾಷ್ಟ್ರದ ಹಿತಾಸಕ್ತಿಯ ಚಿಂತೆ ನಿಮಗಿಲ್ಲವಾ? ನೀವು ನನ್ನ ನೀತಿಗಳನ್ನು ಪ್ರಶ್ನಿಸಬಹುದು. ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲದಿರಬಹುದು. ಆದರೆ, ಕನಿಷ್ಠಪಕ್ಷ ನಮ್ಮ ಯೋಧರ ಮೇಲಾದರೂ ನಿಮಗೆ ನಂಬಿಕೆ ಇರಲಿ. ಅವರ ಶೌರ್ಯದ ಬಗ್ಗೆ ಅನುಮಾನ ಪಡಬೇಡಿ” ಎಂದು ಮೋದಿ ಮನವಿ ಮಾಡಿದ್ದಾರೆ.

ಚುನಾವಣೆಗೋಸ್ಕರ ಸೇನಾ ಕಾರ್ಯಾಚರಣೆಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ವಿಪಕ್ಷಗಳ ಆರೋಪವನ್ನೂ ಮೋದಿ ತಳ್ಳಿಹಾಕಿದ್ದಾರೆ. “ಮೊದಲ ಸರ್ಜಿಕಲ್ ಸ್ಟ್ರೈಕ್ ನಡೆದಾಗ ಯಾವುದಾದರೂ ಚುನಾವಣೆ ಇತ್ತಾ? ಕಳೆದ 40 ವರ್ಷಗಳಿಂದ ನಾವು ಭಯೋತ್ಪಾದನೆಯಿಂದ ಘಾಸಿಗೊಂಡಿದ್ದೇವೆ. ನಾನು ಅಧಿಕಾರಕ್ಕೆ ಚಿಂತೆ ಮಾಡುವುದಿಲ್ಲ. ನನಗೆ ನನ್ನ ದೇಶದ ಭದ್ರತೆಯ ಬಗ್ಗೆಯಷ್ಟೇ ಚಿಂತೆ ಇದೆ” ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನಿನ್ನೆ ಕೂಡ ಈ ವಿಚಾರವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ರಫೇಲ್ ಯುದ್ಧ ವಿಮಾನದ ವಿಚಾರವಾಗಿ ವಿಪಕ್ಷಗಳು ರಾಜಕೀಯ ಮಾಡದೇ ಹೋಗಿದ್ದರೆ ಈ ಸೇನಾ ಕಾರ್ಯಾಚರಣೆಯ ಫಲಿತಾಂಶವೇ ವಿಭಿನ್ನವಾಗಿರುತ್ತಿತ್ತು ಎಂದು ಮೋದಿ ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ