ಇಸ್ಲಾಮಾಬಾದ್: ಭಾರತ ಮತ್ತು ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತನ್ನವರನ್ನೇ ಅಪಾಯಕ್ಕೆ ಸಿಲುಕಿಸಲು ಪಾಕಿಸ್ತಾನ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಜೈಷ್ ಎ ಮೊಹಮ್ಮದ್ ಸಂಘಟನೆಯ ಕೆಲ ಪ್ರಮುಖ ಉಗ್ರರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕ್ ಮೇಲೆ ದಾಳಿ ಮಾಡಿದ ಭಾರತೀಯ ಯೋಧನನ್ನು ಬಿಟ್ಟು ಕಳುಹಿಸಲು ಪ್ರಧಾನಿ ಇಮ್ರಾನ್ ಖಾನ್ ಸಮ್ಮತಿಸಿದರು. ಈಗ ಧಾರ್ಮಿಕ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದಾರೆ. ಶತ್ರುವಿನ ವಿಷಯದಲ್ಲಿ ಮೃದುಧೋರಣೆ ಅನುಸರಿಸುತ್ತಿರುವ ಅವರು, ತಮ್ಮವರ ಬಗ್ಗೆ ಕಠಿಣ ನಿಲುವು ತೆಳೆಯುತ್ತಿದ್ದಾರೆ. ಇದು ಸರಿಯಲ್ಲ ಎಂದು ಇಮ್ರಾನ್ ಖಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಮೆರಿಕದ ವಿಶ್ವ ವಾಣಿಜ್ಯ ಸಂಘಟನೆಯ ಅವಳಿ ಕಟ್ಟಡಗಳ ಮೇಲೆ 9/11ರಂದು ನಡೆದ ದಾಳಿಯ ನಂತರದಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿದ್ದ ಪರ್ವೇಜ್ ಮುಷರ್ರಫ್ ಪಾಕಿಸ್ತಾನದಲ್ಲಿದ್ದ ಭಯೋತ್ಪಾದನೆ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಅಮೆರಿಕದ ಒತ್ತಡದ ಹಿನ್ನೆಲೆಯಲ್ಲಿ ಅವರು ಈ ಕ್ರಮ ಅನುಸರಿಸಿದ್ದರು. ಇದೀಗ ಪ್ರಧಾನಿ ಇಮ್ರಾನ್ ಖಾನ್ ಕೂಡ ಪರ್ವೆಜ್ ಮುಷರ್ರಫ್ ಅವರಂತೆ ಭಯೋತ್ಪಾದನೆ ಸಂಘಟನೆಗಳನ್ನು ನಿಗ್ರಹಿಸುವ ದಮನಕಾರಿ ನೀತಿಗಳನ್ನು ಅನುಸರಿಸಲಾರಂಭಿಸಿದ್ದಾರೆ ಎಂದು ಜೈಷ್ ಆರೋಪಿಸಿದೆ.
ಐಎಎಫ್ ದಾಳಿ ನಡೆದಿದ್ದು ನಿಜ: ಬಾಲಾಕೋಟ್ನ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತೀಯ ವಾಯುಪಡೆ ಯೋಧರು ದಾಳಿ ಮಾಡಿದ್ದು ನಿಜ. ದಾಳಿಯಲ್ಲಿ ಅವರು ಇಸ್ರೇಲ್ ನಿರ್ಮಿತ ನಿರ್ದೇಶಿಸಬಹುದಾದ ಕ್ಷಿಪಣಿಗಳನ್ನು ಬಳಸಿದ್ದರು. ಆದರೆ, ಅದರಿಂದ ಯಾವುದೇ ತೊಂದರೆಯಾಗಿಲ್ಲ ಎಂದು ಜೈಷ್ ಉಗ್ರರು ಸ್ಪಷ್ಟಪಡಿಸಿದ್ದಾರೆ.