ಮನೆ ಗೋಡೆ ಕುಸಿದು ಬಾಲಕನ ಸಾವು

ಟಿ.ನರಸೀಪುರ, ಮಾ.3- ಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಇಂಡವಾಳು ಗ್ರಾಮದಲ್ಲಿ ಸಂಭವಿಸಿದೆ.

ಇಂಡವಾಳು ಗ್ರಾಮದ ನಿವಾಸಿ ಲೋಕೇಶ್ ಎಂಬುವರ ದ್ವಿತೀಯ ಪುತ್ರ ಚಂದು (10) ಮೃತಪಟ್ಟ ಬಾಲಕ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ 4ನೆ ತರಗತಿಯಲ್ಲಿ ಓದುತ್ತಿದ್ದ ಚಂದು ಚಿಕ್ಕಣ್ಣನ ಮಾಧು ಎಂಬುವರ ಪಾಳು ಬಿದ್ದ ಮನೆಯ ಬಳಿ ಸ್ನೇಹಿತರೊಂದಿಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಶಿಥಿಲಗೊಂಡಿದ್ದ ಮನೆಯ ಗೋಡೆ ಈತನ ಮೇಲೆ ಕುಸಿದು ಬಿದ್ದಿದೆ.

ಕುಸಿದು ಬಿದ್ದ ಗೋಡೆಯ ಅಡಿ ಸಿಲುಕಿದ ಚಂದು ಗಾಯಗೊಂಡಿದ್ದಾನೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಮೇಲೆತ್ತಿ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ.ಉಸಿರಾಟಕ್ಕೆ ತೀವ್ರ ತೊಂದರೆ ಉಂಟಾದ್ದರಿಂದ ವೈದ್ಯರ ಸಲಹೆ ಮೇರೆಗೆ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ