ಅಮೆರಿಕ ನಿರ್ಮಿತ ಅತ್ಯಾಧುನಿಕ ಎಫ್​-16 ಯುದ್ಧ ವಿಮಾನ ಹೊಡೆದುರುಳಿಸಿದ ಮೊದಲ ವಿಂಗ್ ಕಮಾಂಡರ್ ಅಭಿನಂದನ್

ನವದೆಹಲಿ: ಅತ್ಯಾಧುನಿಕ ಎಫ್​-16 ಅನ್ನು ಹೊಡೆದುರುಳಿಸಿದ ಮೊದಲ ಯುದ್ಧ ಪೈಲಟ್​ ಅಭಿನಂದನ್​ ವರ್ಧಮಾನ್ ಎಂದು ವಾಯುಪಡೆಯ ನಿವೃತ್ತ ಏರ್​ ಚೀಫ್​ ಮಾರ್ಷಲ್​ ಕೃಷ್ಣಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಮಿಗ್​ 21 ಯುದ್ಧ ವಿಮಾನ ಅತ್ಯಾಧುನಿಕವಾದರೂ, ಅಮೆರಿಕ ನಿರ್ಮಿತ ಎಫ್​-16ಗೆ ಸರಿಸಾಟಿಯಲ್ಲ. ಆದರೂ, ಮಿಗ್​ ಯುದ್ಧ ವಿಮಾನ ಚಲಾಯಿಸುತ್ತಿದ್ದ ಭಾರತೀಯ ವಿಂಗ್​ ಕಮಾಂಡರ್​ ಅಭಿನಂದನ್​ ಪಾಕಿಸ್ತಾನದ ಎಫ್​-16 ಅನ್ನು ಹೊಡೆದುರುಳಿಸಿದ್ದಾರೆ. ಅವರು ಎಫ್​16 ಹೊಡೆದು ಹಾಕಿದ ಮೊದಲ ಪೈಲಟ್​ ಎಂದು ಅವರು ಹೇಳಿದ್ದಾರೆ.

ಸಾಹಸ ಮೆರೆದಿರುವ ಅಭಿನಂದನ್​ ಅವರು ಅತೀ ಶೀಘ್ರದಲ್ಲೇ ಯುದ್ಧ ವಿಮಾನದ ಕಾಕ್​ಪಿಟ್​ಗೆ ಮರಳಲಿ (ವಾಯುಸೇನೆಯ ಸೇವೆಗೆ ಮರಳಲಿ) ಎಂದು ಕೃಷ್ಣ ಸ್ವಾಮಿ ಆಶಿಸಿದ್ದಾರೆ.

ಎಫ್​-16 ಯುದ್ಧ ವಿಮಾನ ಅಮೆರಿಕ ನಿರ್ಮಿತ ಯುದ್ಧವಿಮಾನವಾಗಿದೆ. ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಗಾಗಿ ಅಮೆರಿಕವು ಪಾಕಿಸ್ತಾನಕ್ಕೆ ಹಲವು ಎಫ್​-16 ವಿಮಾನಗಳನ್ನು ಮಾರಾಟ ಮಾಡಿದೆ.

ಭಾರತೀಯ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಎಫ್​-16 ಯುದ್ಧ ವಿಮಾನಗಳನ್ನು ಬೆನ್ನಟ್ಟಿ ಹೋಗಿದ್ದ ಭಾರತೀಯ ಮಿಗ್​ 21 ವಿಮಾನವನ್ನು ವಿಂಗ್​ ಕಮಾಂಡರ್​ ಅಭಿನಂದನ್​ ಚಲಾಯಿಸುತ್ತಿದ್ದರು. ಎಫ್​-16 ಜತೆಗೆ ಕಾಳಗ ನಡೆಸಿದ್ದ ವೇಳೆ ಪಾಕ್ ವಿಮಾನವನ್ನು ಹೊಡೆದುರುಳಿಸಿದ್ದರು ಆದರೆ ಇದೇ ವೇಳೆ ಅಭಿನಂದನ್ ಇದ್ದ ವಿಮಾನೂ ಪತನವಾಗಿತ್ತು. ನಂತರ ಪ್ಯಾರಾಚೂಟ್​ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕಿದ್ದ ಅವರನ್ನು ಅಲ್ಲಿನ ಸೇನೆ ಬಂಧಿಸಿತ್ತು. ಕಳೆದ ಶುಕ್ರವಾರ ರಾತ್ರಿ ಪಾಕಿಸ್ತಾನ ಅವರನ್ನು ಭಾರತಕ್ಕೆ ಹಸ್ತಾಂತರ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ