ಚಿಕ್ಕಮಗಳೂರು, ಮಾ.2-ಕಾಫಿ ನಾಡಿನಲ್ಲಿ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಎರಡು ದಿನಗಳ ಕಾಲ ಅಕ್ಷರ ಜಾತ್ರೆ ನಡೆಯಲಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಮ್ಮೇಳನದ ಅಧ್ಯಕ್ಷರಾಗಿದ್ದು, ಅವರನ್ನು ಇಂದು ಬೆಳಗ್ಗೆ ನಗರದ ಎಂ.ಜಿ.ರಸ್ತೆಯ ಗಣಪತಿ ದೇವಾಲಯದಿಂದ ಮೆರವಣಿಗೆ ಮೂಲಕ ಮುಖ್ಯ ಅಂಚೆ ಕಚೇರಿ ಮಾರ್ಗವಾಗಿ ಕಲಾಮಂದಿರದಲ್ಲಿ ನಡೆಯುತ್ತಿರುವ ಸಮ್ಮೇಳನದ ಸ್ಥಳಕ್ಕೆ ಸಮ್ಮೇಳನಾಧ್ಯಕ್ಷರನ್ನು ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕರಾದ ಕೆ.ಎನ್.ಜಾನಕಿ, ಬೆಳಗಾವಿ ಕನ್ನಡ ಸಾಹಿತ್ಯ ಪರಿಷತ್ನ ಮಂಗಳ ಬೆಳಗೊಳ ಸಾರೋಟಿನಲ್ಲಿ ಕರೆತಂದರು.
ಮೆರವಣಿಗೆಯಲ್ಲಿ ಕಸಾಪ ಅಧ್ಯಕ್ಷ ಮನುಬಳಿಗಾರ್, ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್, ಕಾಂಗ್ರೆಸ್ನ ಜಿಲ್ಲಾಧ್ಯಕ್ಷ ಡಾ.ವಿಜಯ್ಕುಮಾರ್ ಸೇರಿದಂತೆ ಮಹಿಳಾ ಸಾಹಿತಿಗಳು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮೆರವಣಿಗೆಯುದ್ದಕ್ಕೂ ಉಡುಪಿನ ಮಹಿಳಾ ಚಂಡೆ, ಚಿಕ್ಕಮಗಳೂರಿನ ಮಹಿಳಾ ವೀರಗಾಸೆ ಕುಣಿತದ ತಂಡಗಳು ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಅಕ್ಷರ ಜಾತ್ರೆಯ ಆರಂಭಕ್ಕೆ ಮೆರಗು ನೀಡಿದವು.
ಕುವೆಂಪು ಕಲಾಮಂದಿರದಲ್ಲಿ ನಡೆಯುತ್ತಿರುವ 2ನೇ ಮಹಿಳಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ಸ್ಥಳದಲ್ಲಿ 4 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು, ಖಾದಿ ಮಳಿಗೆ ಸೇರಿದಂತೆ ಇನ್ನಿತರ ಮಳಿಗೆಗಳು ಇಂದು ಉದ್ಘಾಟನೆಗೊಂಡವು.
ಇಂದು ಮಧ್ಯಾಹ್ನ ಕನ್ನಡ ಸಾಹಿತ್ಯದಲ್ಲಿ ಮಹಿಳೆಯರ ನೋಟ ಕುರಿತ ಚಿಂತನಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯದಲ್ಲಿ ಮಹಿಳಾ ಪ್ರತಿನಿಧೀಕರಣ ಕುರಿತು ಡಾ.ರಾಜೇಶ್ವರಿ ಮಹೇಶ್ವರಯ್ಯ ಮಾತನಾಡುವರು.
ಮಹಿಳೆಯ ದೃಷ್ಟಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಎಚ್.ಎಲ್.ಪುಷ್ಪ ಜಾನಪದ ಮತ್ತು ಶಾಸನಗಳಲ್ಲಿ ಮಹಿಳಾ ಚಿತ್ರಣ ಕುರಿತ ಚಿಂತನಾಗೋಷ್ಠಿಗಳು ನಡೆಯಲಿವೆ.
ಇಂದು ಸಂಜೆ 4 ಗಂಟೆಗೆ ಸಮ್ಮೇಳನಾಧ್ಯಕ್ಷೆ ಸುಧಾಮೂರ್ತಿ ಸಂವಾದ ಕಾರ್ಯಕ್ರಮವು ನಡೆಯಲಿದೆ.ನಾಳೆ ಬೆಳಗ್ಗೆ 10 ಗಂಟೆಯಿಂದ ಸಂಜೆಯವರೆಗೂ ವಿವಿಧ ಗೋಷ್ಠಿಗಳು ನಡೆಯಲಿದ್ದು, ಇಂದು ಸಂಜೆ 7 ಗಂಟೆಗೆ ಶಿರಸಿಯ ಜ್ಯೋತಿ ಹೆಗಡೆ ಅವರಿಂದ ರುದ್ರವೀಣೆ ಕಾರ್ಯಕ್ರಮ ಹಾಗೂ ಜಯದೇವಿ ಅವರಿಂದ ವಚನ ಮತ್ತು ದಾಸರಪದಗಳ ಕಾರ್ಯಕ್ರಮ ನೆರವೇರಲಿದೆ.