ಮೈಸೂರು, ಮಾ.2-ಮದ್ಯಸೇವನೆಗೆ ಹಣ ಕೊಡದ ತಾಯಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಆರೋಪಿಗೆ ಮೈಸೂರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನಗರದ ಸುಣ್ಣದಕೇರಿ ನಿವಾಸಿ ಸುಂದರಂ ತನ್ನ ತಾಯಿ ಗೋವಿಂದಮ್ಮ ಅವರನ್ನು ಕೊಲೆ ಮಾಡಿದ್ದನು.
2017ರ ಜೂನ್ 30 ರಂದು ಹಣ ಕೊಡುವಂತೆ ತಾಯಿಗೆ ಪೀಡಿಸಿದ್ದಾನೆ. ಹಣ ಕೊಡಲು ನಿರಾಕರಿಸಿದಾಗ ದೋಸೆ ತವಾದಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು.
ಈ ಬಗ್ಗೆ ನೆರೆಹೊರೆಯವರು ಪೋಲೀಸರಿಗೆ ವಿಷಯ ತಿಳಿಸಿದ್ದರು.
ಕೆ.ಆರ್.ಠಾಣೆ ಪೋಲೀಸರು ಪ್ರಕರಣ ದಾಖಲಿಸಿ ಆರೋಪಿ ಸುಂದರಂನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಮೈಸೂರಿನ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಅವರು ತೀರ್ಪು ನೀಡಿ ಆರೋಪಿ ಸುಂದರಂಗೆ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಮಹಾಂತಪ್ಪ ವಾದ ಮಂಡಿಸಿದ್ದರು.