ಜನ ಸೇವಕ ಯೋಜನೆಯನ್ನು ಉದ್ಘಾಟಿಸಲು ಬೈಕ್ ಏರಿದ ಸಿಎಂ ಹೆಚ್ಡಿಕೆ

ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದೆ. ಹೀಗಾಗಿ ಕಾಂಗ್ರೆಸ್​ನೊಂದಿಗೆ ಅಧಿಕಾರ ಹಂಚಿಕೊಂಡಿರುವ ಜೆಡಿಎಸ್ ತನ್ನ ಅಧಿಕಾರ ಬಳಸಿ ಹೆಚ್ಚಿನ ಸ್ಥಾನ ಗಳಿಸಲು ಕಸರತ್ತು ನಡೆಸುತ್ತಿದೆ. ಅಲ್ಲದೆ ಸಿಎಂ ಸ್ವತಃ ಬೈಕನ್ನೇರಿ ನಾನು ಜನಸೇವಕ ಎಂದು ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸಿದ್ರು.

ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಸರಘಟ್ಟ ಮುಖ್ಯ ರಸ್ತೆಯ ಎಂ.ಇ.ಐ ಮೈದಾನದಲ್ಲಿ ಶಾಸಕರ ಕಚೇರಿ ಉದ್ಘಾಟನೆ ಸೇರಿದಂತೆ ಬಿಬಿಎಂಪಿಯ 860 ಕೋಟಿ ರೂಪಾಯಿ ಅನುದಾನದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.

ಇದೇ ವೇಳೆ ಜನಸೇವಕ ಯೋಜನೆಯನ್ನು ಉದ್ಘಾಟಿಸಲು ಸ್ವತಃ ಸಿಎಂ ಬೈಕನ್ನೇರಿ ಮನೆಗಳಿಗೆ ಭೇಟಿ ನೀಡಿದ್ರು. ಕಂದಾಯ, ಆರೋಗ್ಯ, ಶಿಕ್ಷಣ, ಕೃಷಿ, ಬಿಬಿಎಂಪಿ, ಬಿಡಿಎ, ಬೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ನಾಗರಿಕ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ವಿತರಿಸಲಿರುವ ಜನಸೇವಕ ಕಾರ್ಯಕ್ರಮ ಇದಾಗಿದ್ದು, ಕರ್ನಾಟಕದಲ್ಲಿ ಮೊದಲ ಬಾರಿಗೆ ಜಾರಿಗೆ ತರಲಾಗುತ್ತಿದೆ. ಆದ್ರೆ ಸಿಎಂ ದಿಢೀರ್ ಬೈಕ್ ಸವಾರಿಗೆ, ಭದ್ರತೆ ಒದಗಿಸಬೇಕಾದ ಪೊಲೀಸರು ಪೇಚೆಗೆ ಸೀಲುಕಿದ್ರು. ಸಿಎಂ ಯಾವ ಗಲ್ಲಿಗೆ ಹೋಗಿ ಎಲ್ಲಿ ಹೊರಬರುತ್ತಾರೆ ಎಂದು ತಿಳಿಯುವಲ್ಲಿ ಹೈರಾಣಾಗಿದ್ರು.

ಫೆ. 25ರಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮಹಾಲಕ್ಷೀ ಲೇಔಟ್ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂದು ದಾಸರಹಳ್ಳಿ ಕ್ಷೇತ್ರದ ವಿವಿಧ ಅಭಿವೃದ್ಧಿ ಯೋಜನೆ ಉದ್ಘಾಟಿಸಿ, ಸರ್ಕಾರಿ ಯೋಜನೆಗಳ ಪಲಾನುಭವಿಗಳಿಗೆ ಹಕ್ಕುಪತ್ರ ಒದಗಿಸಿದ್ದಾರೆ. ಹಾಗೇ ಸಬ್ ಅರ್ಬನ್ ರೈಲ್ವೆ ನಿಮ್ಮ ಮಣ್ಣಿನ ಮಗ ದೇವೇಗೌಡರ ಕನಸಿನ ಕೂಸು. ಇದೀಗ ಅದಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ ಎಂದು ದೇವೇಗೌಡರ ಪರ ಬ್ಯಾಟಿಂಗ್ ಬೀಸಿ ದೇವೆಗೌಡರು ಇದೇ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸೋ ಸುಳಿವನ್ನು ಸಿಎಂ ನೀಡಿದ್ರು. ಹಾಗೇ ನಾವು ಅತ್ತ ಸಾಲಮನ್ನಾವನ್ನೂ ಮಾಡಿ, ಇತ್ತ 17 ಸಾವಿರ ಕೋಟಿ ವೆಚ್ಚದಲ್ಲಿ ಫೆರಿಫೆರಲ್ ರಸ್ತೆಯನ್ನು ಮಾಡುತ್ತಿದ್ದೇವೆ. ಆದ್ರೆ ನೀವು ವೋಟನ್ನು ಯಾರ್ಯಾರಿಗೋ ಹಾಕ್ತೀರಿ ಅಂತ ಪರೋಕ್ಷವಾಗಿ ಸದಾನಂದಗೌಡರಿಗೆ ಸಿಎಂ ಟಾಂಗ್ ನೀಡಿದ್ರು.

ಒಟ್ಟಾರೆಯಾಗಿ ಕೇಂದ್ರ ಸಚಿವ ಸದಾನಂದಗೌಡರು ಮಾತ್ರ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮಕ್ಕೆ ಗೈರಾಗಿದ್ದು, ಹಲವು ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಹಾಗೇ ಸಿಎಂ ಮಾಡುತ್ತಿರೋ ಬೆಂಗಳೂರು ಉತ್ತರ ಕ್ಷೇತ್ರದ ಬೃಹತ್ ಕಾರ್ಯಕ್ರಮಗಳು ದೇವೇಗೌಡರು ಇಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬುದಕ್ಕೆ ಮತ್ತಷ್ಟು ಪುಷ್ಠಿ ನೀಡುವಂತಾಗಿದೆ.

ಕಾರ್ಯಕ್ರಮದಲ್ಲಿ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್, ಜಿಲ್ಲಾಧಿಕಾರಿ ವಿಜಯ್ ಭಾಸ್ಕರ್, ಮೇಯರ್ ಗಂಗಾಂಬಿಕೆ, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಶಾಸಕ ಗೋಪಾಲಯ್ಯ ಭಾಗಿಯಾಗಿದ್ರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ