ಇಸ್ಲಾಮಾಬಾದ್: ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರು ಹೊಡೆದುರುಳಿಸಿದ ಪಾಕಿಸ್ತಾನದ ಎಫ್-16 ವಿಮಾನದಲ್ಲಿದ್ದ ಪೈಲಟ್ ಶಹನಾಜ್ ಉದ್ ದಿನ್ ಎಂಬುವವರನ್ನು ಭಾರತೀಯ ಪೈಲಟ್ ಎಂದು ಭಾವಿಸಿದ ಪಾಕಿಸ್ತಾನ ನಾಗರಿಕರು ಅವರನ್ನು ಹೊಡೆದು ಕೊಂದುಹಾಕಿದ್ದಾರೆ ಎಂದು ತಿಳಿದುಬಂದಿದೆ.
ಅಭಿನಂದನ್ ಅವರ ವಿಮಾನ ಮತ್ತು ಪಾಕ್ನ ಎಫ್-16 ವಿಮಾನದ ನಡುವೆ ನಡೆದ ಕಾಳಗದಲ್ಲಿ ಎರಡೂ ವಿಮಾನಗಳು ಪತನವಾಗಿ, ಅಭಿನಂದನ್ ಹಾಗೂ ಎಫ್-16 ವಿಮಾನದಲ್ಲಿದ್ದ 19ನೇ ಸ್ಕ್ವಾಡ್ರನ್ನ ವಿಂಗ್ ಕಮಾಂಡರ್ ಶಹನಾಜ್ ಉದ್ ದಿನ್ ಮತ್ತು ಅನಾಮಿಕ ಪೈಲಟ್ ಸೇರಿ ಒಟ್ಟು ಮೂವರು ಪ್ಯಾರಾಚೂಟ್ ಬಳಸಿ ಇಳಿದಿದ್ದರು.
ಇದನ್ನು ಗಮನಿಸಿದ ಜನರು ಪೈಲಟ್ಗಳು ಇರುವ ಸ್ಥಳಕ್ಕೆ ಧಾವಿಸಿ, ಪಾಕ್ ಪೈಲಟ್ ಶಹನಾಜ್ ಅವರನ್ನು ಭಾರತೀಯ ಎಂದು ತಿಳಿದುಕೊಂಡು ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಕಾಲ್ಲಿನಿಂದಲೂ ಹೊಡೆದಿದ್ದಾರೆ. ಗಂಭೀರವಾಗಿ ಹಲ್ಲೆಗೊಳಗಾದ ಶಹನಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮತ್ತೊಂದೆಡೆ ಇಳಿದಿದ್ದ ಅಭಿನಂದನ್ ಅವರ ಮೇಲೂ ಕೆಲವು ಯುವಕರು ಹಲ್ಲೆ ನಡೆಸಲು ಯತ್ನಿಸಿದ್ದರು. ತಕ್ಷಣ ಅಭಿನಂದನ್ ತಮ್ಮ ಬಳಿ ಇದ್ದ ಪಿಸ್ತೂಲ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ತಮ್ಮನ್ನು ರಕ್ಷಿಸಿಕೊಂಡು ಓಡಿದ್ದಾರೆ. ಆದರೂ ಕೆಲವರು ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಆದರೆ, ಅಷ್ಟರೊಳಗೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಕ್ ಸೈನಿಕರು ಅಭಿನಂದನ್ ಅವರನ್ನು ಪಾಕ್ ಜನರಿಂದ ರಕ್ಷಿಸಿ, ತಮ್ಮ ವಶಕ್ಕೆ ಪಡೆದಿದ್ದರು. ಅಂತಿಮವಾಗಿ ಭಾರತದ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.
Pakistan pilot Killed by Local Pakistani Thinking He was an Indian Pilot