ಭಾರತಕ್ಕೆ ಆಗಮಿಸಿದ ವಿಂಗ್ ಕಮಾಂಡರ್ ಅಭಿನಂದನ್

ವಾಘಾ, ಮಾ.1-ಭಾರತದ ಪಾಲಿಗೆ ಇಂದು ‘ಅಭಿ’ ನಂದನಾ ದಿನ. ಕಳೆದ ಮೂರು ದಿನಗಳಿಂದ ಭಾರತೀಯರು ಮಾಡಿದ ಪ್ರಾರ್ಥನೆ ಈಡೇರಿದ ಕ್ಷಣ… ಪಾಕಿಸ್ತಾನದ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವೀರಪುತ್ರ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಇಂದು ತಾಯ್ನಾಡಿಗೆ ಹಿಂದಿರುಗಿದ್ದು, ಭಾರತೀಯರ ಸಂಭ್ರಮ, ಸಡಗರ, ವಿಜಯೋತ್ಸಾಹ ಮುಗಿಲು ಮುಟ್ಟಿದೆ.

ಭಾರತ-ಪಾಕಿಸ್ತಾನ ಗಡಿ ಪ್ರದೇಶವಾದ ವಾಘಾ ಮೂಲಕ ಅಭಿನಂದನ್ ಇಂದು ತಾಯ್ನೆಲವನ್ನು ಸ್ಪರ್ಶಿಸಿದ್ದು, ಈ ಪ್ರದೇಶದಲ್ಲಿ ನೆರೆದಿದ್ದ ಸಹಸ್ರಾರು ಭಾರತೀಯರಲ್ಲಿ ಮಿಂಚಿನ ಸಂಚಲನಕ್ಕೆ ಸಾಕ್ಷಿಯಾಯಿತು. ಜಯಘೋಷಗಳೊಂದಿಗೆ ಸಹಸ್ರಾರು ಮಂದಿ, ವೀರಯೋಧ ಅಭಿನಂದನ್‍ಗೆ ಅದ್ಧೂರಿ ಸ್ವಾಗತ ಕೊರಿದರು.

ಜಾನಪದ ಕಲಾತಂಡಗಳು ವಾದ್ಯಗಳನ್ನು ನುಡಿಸಿ, ಅಭಿನಂದನ್ ಗೆ ಅದ್ದೂರಿ ಸ್ವಾಗತ ಕೋರಿದರು.

ಕೇಂದ್ರ ಸರ್ಕಾರದ ಸಚಿವರು, ಸಂಸದರು, ಸೇನಾ ಪಡೆಗಳ ಉನ್ನತಾಧಿಕಾರಿಗಳು, ಅಭಿನಂದನ್ ಅವರ ಪೋಷಕರಾದ ಏರ್ ಮಾರ್ಷಲ್ (ನಿವೃತ್ತ) ಎಸ್.ವರ್ತಮಾನ್ ಮತ್ತು ಡಾ.ಶೋಭಾ, ಬಂಧು-ಮಿತ್ರರು ಮತ್ತು ದೇಶಾಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಬೆಳಗ್ಗೆಯಿಂದಲೇ ವಾಘಾ ಗಡಿಯಲ್ಲಿ ಜಮಾವಣೆಗೊಂಡಿದ್ದರು.

ಇಂದು ಬೆಳಗ್ಗೆ 11 ಗಂಟೆ ಸುಮಾರಿನಲ್ಲಿ ಲಾಹೋರ್‍ನಲ್ಲಿರುವ ಪಾಕಿಸ್ತಾನದ ಉನ್ನಾತಾಧಿಕಾರಿಗಳು ಭಾರತದ ಹೈಕಮಿಷನರ್ ಕಚೇರಿಯಲ್ಲಿ ಅಧಿಕಾರಿಗಳಿಗೆ ಅಭಿನಂದನ್ ಅವರನ್ನು ಅಧಿಕೃತವಾಗಿ ಹಸ್ತಾಂತರಿಸಿದರು. ಲಾಹೋರ್‍ನಿಂದ ವಾಘಾ ಗಡಿ 24ಕಿ.ಮೀ.ದೂರದಲ್ಲಿದೆ.

ನಂತರ ಹೈಕಮಿಷನರ್ ಕಚೇರಿಯ ಅಧಿಕಾರಿಗಳು ಲಾಹೋರ್‍ನಿಂದ ವಿಶೇಷ ಭದ್ರತಾ ವಾಹನದಲ್ಲಿ ವಾಘಾ ಗಡಿಗೆ ಅಭಿನಂದನ್ ಅವರನ್ನು ಕರೆತರಲಿದ್ದಾರೆ. ನಂತರ ಉಭಯ ದೇಶಗಳ ಸೇನಾ ಔಪಚಾರಿಕ ಪ್ರಕ್ರಿಯೆ ಬಳಿಕ ವಿಂಗ್ ಕಮಾಂಡರ್ ಅವರನ್ನು ಭಾರತಕ್ಕೆ ಅಧಿಕೃತವಾಗಿ ಬರಮಾಡಿಕೊಳ್ಳಲಾಯಿತು. ವಾಘಾ ಗಡಿಯ ಹೆಬ್ಬಾಗಿಲಿನ ಮೂಲಕ ಅಭಿನಂದನ್ ತಾಯ್ನಾಡಿಗೆ ಪಾದಾರ್ಪಣೆ ಮಾಡಿ ಭಾರತ ಭೂಮಿಗೆ ನಮಿಸಿ ಗೌರವ ಸಲ್ಲಿಸಿದರು.

ಫೆ.14ರಂದು ಪುಲ್ವಾಮಾ ಉಗ್ರರ ದಾಳಿ ನಂತರ ಪ್ರತೀಕಾರದ ಕ್ರಮವಾಗಿ ಭಾರತೀಯ ವಾಯುಪಡೆಗಳು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಶಿಬಿರಗಳು ಮತ್ತು ಅಡಗು ತಾಣಗಳನ್ನು ಧ್ವಂಸಗೊಳಿಸಿತು. ಈ ಮಿಂಚಿನ ಏರ್ ಸರ್ಜಿಕಲ್ ಸ್ಟ್ರೈಕ್‍ನಲ್ಲಿ 350ಕ್ಕೂ ಹೆಚ್ಚು ಉಗ್ರರು ಹತರಾಗಿ ಅವರ ಶಸ್ತ್ರಾಸ್ತ್ರ ಕೋಠಿ ಮತ್ತು ತರಬೇತಿ ಶಿಬಿರಗಳು ನುಚ್ಚು ನೂರಾದವು.

ಭಾರತದ ಈ ಮಿಂಚಿನ ದಾಳಿಗೆ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ಎಫ್-16 ಯುದ್ಧ ವಿಮಾನಗಳು ಭಾರತೀಯ ವಾಯು ಸರಹದ್ದು ಉಲ್ಲಂಘಿಸಿ ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯ ನೌಶೇರಾದಲ್ಲಿ ಪ್ರತಿ ದಾಳಿಗೆ ಯತ್ನಿಸಿತ್ತು. ಆದರೆ, ಭಾರತೀಯ ವಾಯು ಪಡೆಯ ಸುಖೋಯ್ ಮತ್ತು ಮಿಗ್-21 ಯುದ್ಧ ವಿಮಾನಗಳು ಪಾಕಿಸ್ತಾನದ ದುಸ್ಸಾಹಸವನ್ನು ಸಮರ್ಥವಾಗಿ ಹಿಮ್ಮೆಟಿಸಿದ್ದವು.

ಈ ಕಾರ್ಯಾಚರಣೆ ವೇಳೆ ಮಿಗ್-21 ಫೈಟರ್‍ಜೆಟ್‍ನಲ್ಲಿದ್ದ ಅಭಿನಂದನ್ ಪಾಕ್‍ನ ಎಫ್-16 ಯುದ್ಧ ವಿಮಾನವೊಂದನ್ನು ಬೆನ್ನಟ್ಟಿದ್ದರು.ಈ ಸಂದರ್ಭದಲ್ಲಿ ಆಗಸದಲ್ಲಿ ಏರ್‍ಫೈಟ್ ನಡೆಯಿತು.ತೀವ್ರ ಹಾನಿಗೀಡಾದ ತಮ್ಮ ವಿಮಾನ ಪಾಕಿಸ್ತಾನದ ಗಡಿಯೊಳಗೆ ಬೀಳುವುದಕ್ಕೂ ಮುನ್ನ ಸಾಹಸ ಮೆರೆದ ಅಭಿನಂದನ್ ಎಫ್-16 ವಿಮಾನವನ್ನು ಹೊಡೆದುರುಳಿಸಿ ಸುರಕ್ಷಿತವಾಗಿ ಕೆಳಗಿಳಿದರು. ಆದರೆ, ಅವರು ಇದು ಭಾರತದ ಗಡಿ ಎಂದು ಭಾವಿಸಿದ್ದರು.ಇದೇ ಸಂದರ್ಭದಲ್ಲಿ ಅವರನ್ನು ಸುತ್ತುವರೆದ ಪಾಕಿಸ್ತಾನದ ಸ್ಥಳೀಯ ಯುವಕರು ಅಭಿನಂದನ್ ಮೇಲೆ ಹಲ್ಲೆ ನಡೆಸಿದ್ದರು. ಇದೇ ಸಂದರ್ಭದಲ್ಲಿ ಅಲ್ಲಿಗೆ ಧಾವಿಸಿದ ಪಾಕ್ ಸೇನಾಪಡೆಗಳು ಅವರನ್ನು ವಶಕ್ಕೆ ತೆಗೆದುಕೊಂಡು ಬಂಧನದಲ್ಲಿಟ್ಟು ಹಿಂಸಿಸಿದ್ದವು.ಆದರೆ, ಜಿನಿವಾ ಒಪ್ಪಂದದ ಪ್ರಕಾರ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಬೇಕೆಂದು ಭಾರತ ಸರ್ಕಾರ ಮತ್ತು ವಿವಿಧ ದೇಶಗಳು ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರಿದವು.ಜತೆಗೆ ಭಾರತ ಮತ್ತು ಪಾಕಿಸ್ತಾನದಲ್ಲೂ ಕೂಡ ಅಭಿನಂದನ್ ಬಿಡುಗಡೆ ವ್ಯಾಪಕ ಕೂಗು ಕೇಳಿ ಬಂದಿತ್ತು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಾಗುತ್ತಿದ್ದಂತೆ ತಣ್ಣಗಾದ ಪಾಕಿಸ್ತಾನ ರಾಜತಾಂತ್ರಿಕ ಆಗ್ರಹಕ್ಕೆ ಮಣಿದು ಭಾರತದ ಪೈಲೆಟ್‍ನನ್ನು ಬಿಡುಗಡೆಗೊಳಿಸಲು ನಿರ್ಧರಿಸಿತ್ತು.ಈ ಸಂಬಂಧ ಪಾಕ್ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಸಂಸತ್‍ನಲ್ಲಿ ಅಭಿನಂದನ್ ಬಿಡುಗಡೆಗೊಳಿಸುವುದಾಗಿ ಅಧಿಕೃತವಾಗಿ ಘೋಷಿಸಿದ್ದರು.ಇದು ಭಾರತಕ್ಕೆ ಲಭಿಸಿದ ಬಹುದೊಡ್ಡ ರಾಜತಾಂತ್ರಿಕ ಗೆಲುವಾಗಿದೆ.

ಪಾಕಿಸ್ತಾನದ ಈ ಕ್ರಮವನ್ನು ವಿಶ್ವಸಂಸ್ಥೆ ,ಐರೋಪ್ಯ ಸಮುದಾಯ, ಅಮೆರಿಕ, ರಷ್ಯಾ, ಚೀನಾ, ಇಂಗ್ಲೆಂಡ್, ಫ್ರಾನ್ಸ್ ಸೇರಿದಂತೆ ಅನೇಕ ರಾಷ್ಟ್ರಗಳು ಸ್ವಾಗತಿಸಿವೆ.
ಪಾಕಿಸ್ತಾನವು ಜಿನಿವಾ ಒಪ್ಪಂದಕ್ಕೆ ತಲೆಬಾಗಿದೆಯೋ ಅಥವಾ ಭಾರತದ ಅಗಾಧ ಸೇನಾ ಬಲಕ್ಕೆ ಹೆದರಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಿದೆಯೋ ಎಂಬ ಬಗ್ಗೆ ಭಾರತೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ಒಟ್ಟಾರೆ ಭಾರತದ ವೀರ ಸೇನಾನಿ ವಿಂಗ್ ಕಮಾಂಡರ್ ಅಭಿನಂದನ್ ಸುರಕ್ಷಿತವಾಗಿ ಬಿಡುಗಡೆಯಾಗಿ ತಾಯ್ನಾಡಿಗೆ ಹಿಂದಿರುಗಿರುವುದು ಸಮಸ್ತ ಭಾರತೀಯರಲ್ಲಿ ಸಂಭ್ರಮೋಲ್ಲಾಸಕ್ಕೆ ಕಾರಣವಾಗಿದೆ.

wing Commander Abhinandan return

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ