
ಬೆಂಗಳೂರು,ಮಾ.1- ಪರಮ ಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿಯವರ ಪುತ್ಥಳಿ ಪ್ರತಿಷ್ಠಾಪನೆ ಹಾಗೂ ಕ್ರೀಡಾಂಗಣ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳು ಅಭಿಪ್ರಾಯಪಟ್ಟರು.
ಗೋವಿಂದರಾಜನಗರ ವಾರ್ಡ್ನಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣ ಮತ್ತು ಶ್ರೀಗಳ ಕಂಚಿನ ಪುತ್ಥಳಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ತಂದೆತಾಯಿ ಜನ್ಮ ನೀಡಬಹುದು. ಆದರೆ ಜೀವನದಲ್ಲಿ ಉನ್ನತಿ ಸಾಧಿಸಬೇಕಾದರೆ ಗುರುವಿನ ಆಶೀರ್ವಾದ ಇರಬೇಕು. ಇದರ ಜೊತೆಗೆ ಆರೋಗ್ಯವಂತರಾಗಲು ಕ್ರೀಡೆ ಕೂಡ ಮುಖ್ಯ. ಹೀಗಾಗಿ ಗುರುವಿನ ಹೆಸರಿನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಕ್ರೀಡಾಂಗಣದಲ್ಲಿ ನೂರಾರು ಕ್ರೀಡಾಪಟುಗಳು ಸೃಷ್ಟಿಯಾಗಲಿ ಎಂದು ಶ್ರೀಗಳು ಹಾರೈಸಿದರು.
ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಶ್ರೀ ಬಾಲಗಂಗಾಧರನಾಥ ಸ್ವಾಮಿಜೀರವರ ಪುತ್ಥಳಿ ,ಕ್ರೀಡಾಂಗಣ ನಿರ್ಮಾಣಕ್ಕೆ ಸ್ವಾಮಿಜೀರವರ ಹಾಕಿಕೊಟ್ಟ ಅದರ್ಶ , ಮಾರ್ಗದರ್ಶನವೇ ಕಾರಣ. ಪರಿಸರ , ಸಂಸ್ಕೃತಿ ಮತ್ತು ಉತ್ತಮ ರಸ್ತೆಗಳಿಂದ ಗೋವಿಂದರಾಜನಗರ ಅಂತಾರಾಷ್ಟೀಯ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಡಿಸಿಎಂ ಆರ್ .ಅಶೋಕ್ ಮಾತನಾಡಿ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಅತ್ಯಾಧುನಿಕ ಕ್ರೀಡಾಂಗಣದ ಅವಶ್ಯಕತೆ ಇತ್ತು. ಇದೀಗ ಬಾಲಗಂಗಾಧರನಾಥ ಸ್ವಾಮೀಜಿಗಳ ಹೆಸರಿನಲ್ಲಿ ಅತ್ಯಾಧುನಿಕ ಕ್ರೀಡಾಂಗಣ ನಿರ್ಮಾಣಗೊಂಡಿರುವುದರಿಂದ ಕೊರತೆ ನೀಗಿದಂತಾಗಿದೆ ಎಂದರು.
ಮಾಜಿ ಸಚಿವ ವಿ.ಸೋಮಣ್ಣ ಮಾತನಾಡಿ, ಶ್ರೀ ಶಿವಕುಮಾರ್ ಸ್ವಾಮಿಜೀ , ಶ್ರೀ ಬಾಲಗಂಗಾಧರನಾಥ ಸ್ವಾಮಿಜೀಗಳ ಆಶೀರ್ವಾದವೇ ನನಗೆ ಮಾರ್ಗದರ್ಶನ. 10 ತಿಂಗಳ ಅವಧಿಯಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಎಂ.ಸಿ.ಬಡಾವಣೆಯಲ್ಲಿ 200ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮತ್ತು ಸಂಗೊಳ್ಳಿ ರಾಯಣ್ಣ ಆಟದ ಮೈದಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕ್ರೀಡಾಂಗಣದ ರೂವಾರಿ ಹಾಗೂ ಸ್ಥಳೀಯ ಪಾಲಿಕೆ ಸದಸ್ಯ ಕೆ.ಉಮೇಶ್ ಶೆಟ್ಟಿ ಮಾತನಾಡಿ, ಗೋವಿಂದರಾಜನಗರ ವಾರ್ಡ್ ನಲ್ಲಿ ಕ್ರೀಡೆ ,ಆರೋಗ್ಯ ಮತ್ತು ಪರಿಸರಕ್ಕೆ ಆದ್ಯತೆ ನೀಡಲಾಗಿದೆ . ಸಾರ್ವಜನಿಕರ ಆನುಕೂಲಕ್ಕೆ ಪಾಲಿಕೆ ಸೌಧ ಮತ್ತು ಉಚಿತ ವೈಫೈ ಹಾಗೂ ಕ್ರೀಡಾ ಪಟುಗಳಿಗೆ ಉತ್ತೇಜನ ನೀಡಲು ಅಟಲ್ ಶಕ್ತಿ ಕೇಂದ್ರ ಕೀಡಾ ಸಂಕೀರ್ಣ ನಿರ್ಮಾಣ ಮಾಡಲಾಗಿದೆ.
ಶ್ರೀ ಬಾಲಗಂಗಾನಾಥ ಸ್ವಾಮೀಜಿ ಕಂಚಿನ ಪುತ್ಥಳಿ ಹಾಗೂ ಕ್ರೀಡಾಂಗಣ ಅಂತಾರಾಷ್ಟೀಯ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ಯುವ ಕ್ರೀಡಾಪಟುಗಳು ಇದರ ಸದಪಯೋಗಪಡಿಸಿಕೊಂಡು ರಾಜ್ಯ ,ರಾಷ್ಟಕ್ಕೆ ಕೀರ್ತಿ ತರಲಿ ಎಂದು ಹಾರೈಸಿದರು.
ಅತ್ಯುತ್ತಮ ಕ್ರೀಡಾಂಗಣ:
ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅಂತಾರಾಷ್ಟೀಯ ಮಟ್ಟದ ಕ್ರೀಡಾಂಗಣದಲ್ಲಿ ಕ್ರಿಕೆಟ್ , ಕ್ಯಾನೋಪಿ ಸ್ಕೇಟಿಂಗ್ ಟ್ರಾಕ್ , ಬ್ಯಾಸ್ಕೆಟ್ ಬಾಲ್ ಮತ್ತು ಬ್ಯಾಡ್ಮಿಂಟನ್ ವಿವಿಧ ದೇಶಿ , ವಿದೇಶಿ ಕ್ರೀಡೆಗಳನ್ನು ಆಡುವಂತೆ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಿಸಲಾಗಿದೆ. ಹೊನಲು-ಬೆಳಕಿನ ಪಂದ್ಯವಾಡಲು ಬೆಳಕಿನ ವ್ಯವಸ್ತೆ ಮಾಡಲಾಗಿದೆ. ಕ್ರೀಡಾಂಗಣದ ಸುತ್ತಲು ಕ್ರೀಡಾಪಟುಗಳ ಚಿತ್ರ ಹಾಗೂ ಗೋಡೆ ಬರಹ ಬರೆಯಲಾಗಿದೆ.
ಮೇಯರ್ ಗಂಗಾಬಿಕೆ , ಉಪಮಹಾಪೌರ ಭದ್ರೇಗೌಡ, ಶಾಸಕರಾದ ಕೆ.ಗೋಪಾಲಯ್ಯ, ಹೆಚ್.ಎಂ.ರೇವಣ್ಣ , ಅ.ದೇವೇಗೌಡರು ,ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಂಗೀತ ಸಂಜೆ ಏರ್ಪಡಿಸಲಾಗಿತ್ತು . ಕಿಕ್ಕಿರಿದು ತುಂಬಿದ ಜನರು ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು.