ಮಧ್ಯಾಹ್ನ ವೇಳೆಗೆ ವಾಘಾ ಗಡಿ ಮೂಲಕ ಸ್ವದೇಶಕ್ಕೆ ವೀರಪುತ್ರ ಅಭಿನಂದನ್ ವಾಪಸ್

ನವದೆಹಲಿ:  ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಥಮಾನ್ ಅವರು ಇಂದು ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಲಿದ್ದಾರೆ. ಅವರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್​ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ಗುರುವಾರ ಹೇಳಿದ್ದರು. ಅಂತೆಯೇ ಅವರನ್ನು ಪಾಕಿಸ್ತಾನ ಇಂದು ಭಾರತಕ್ಕೆ ಹಸ್ತಾಂತರ ಮಾಡಲಿದೆ.

ಅಭಿನಂದನ್​ ಪಾಲಕರು ಈಗಾಗಲೇ ಅಮೃತಸರ ಬಳಿ ತೆರಳಿದ್ದಾರೆ. ಮಗನನ್ನು ನೋಡಲು ಅವರು ಉತ್ಸುಕರಾಗಿದ್ದಾರೆ. ಇನ್ನು, ವಾಘಾ ಗಡಿ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಮುಂಜಾಗೃತಾ ಕ್ರಮವಾಗಿ ಕಾಶ್ಮೀರದಲ್ಲಿ ಅಂತರ್ಜಾಲದ ಸೇವೆಯ ವೇಗವನ್ನು ಕಡಿಮೆ ಮಾಡಲಾಗಿದೆ.

ಅಭಿನಂದನ್​ ಅವರನ್ನು ಹಸ್ತಾಂತರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಜಮ್ಮು-ಕಾಶ್ಮೀರದ ಜನತೆ ಆತಂಕಕ್ಕೆ ಒಳಗಾಗಿತ್ತು. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವುದರಿಂದ ಕಣಿವೆ ರಾಜ್ಯದ ಜನತೆ ಸ್ವಲ್ಪ ನಿಟ್ಟುಸಿರು ಬಿಟ್ಟಿದೆ.

ಅಭಿನಂದನ್​ ಅವರನ್ನು ಹಸ್ತಾಂತರ ಮಾಡುತ್ತಿರುವುದ ಒಂದೊಳ್ಳೆಯ ನಿರ್ಧಾರ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ. ಇನ್ನು, ಅಭಿನಂದನ್​ಗೆ ಸಂಬಂಧಿಸಿದ 11 ವಿಡಿಯೋಗಳನ್ನು ಯೂಟ್ಯೂಬ್​ ಸಂಸ್ಥೆ ತನ್ನ ತಾಣದಿಂದ ತೆಗೆದು ಹಾಕಿದೆ. ಐಟಿ ಇಲಾಖೆಯ ಕೋರಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್​ ಎಫ್​-16 ಯುದ್ಧವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್​-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್​-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್​ ಮೂಲಕ ಕೆಳಗಿಳಿದ ಅಭಿನಂದನ್​ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು. ಅಭಿನಂದನ್​ ಅವರ ಬಂಧನದ ನಂತರ ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎಲ್ಲೆಡೆ ಹೈ ಅಲರ್ಟ್​ ಘೋಷಿಸಲಾಗಿತ್ತು.

ಅಭಿನಂದನ್​ ಅವರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಭಾರತಕ್ಕೆ ವಾಪಸ್​ ಕಳುಹಿಸುವಂತೆ ಭಾರತ ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಈ ಸಂಬಂಧ ನೆನ್ನೆ ಪಾಕ್​ ಹೈ ಕಮಿಷನರ್ ಅವರಿಗೆ ಸಮನ್ಸ್​ ಜಾರಿ ಮಾಡಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ