ನವದೆಹಲಿ: ಪಾಕಿಸ್ತಾನದ ವಶದಲ್ಲಿರುವ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಥಮಾನ್ ಅವರು ಇಂದು ವಾಘಾ ಗಡಿ ಮೂಲಕ ಭಾರತ ಪ್ರವೇಶಿಸಲಿದ್ದಾರೆ. ಅವರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಎರಡು ದೇಶಗಳ ನಡುವೆ ಶಾಂತಿ ಸಂಕೇತವಾಗಿ ಅಭಿನಂದನ್ ಅವರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗುರುವಾರ ಹೇಳಿದ್ದರು. ಅಂತೆಯೇ ಅವರನ್ನು ಪಾಕಿಸ್ತಾನ ಇಂದು ಭಾರತಕ್ಕೆ ಹಸ್ತಾಂತರ ಮಾಡಲಿದೆ.
ಅಭಿನಂದನ್ ಪಾಲಕರು ಈಗಾಗಲೇ ಅಮೃತಸರ ಬಳಿ ತೆರಳಿದ್ದಾರೆ. ಮಗನನ್ನು ನೋಡಲು ಅವರು ಉತ್ಸುಕರಾಗಿದ್ದಾರೆ. ಇನ್ನು, ವಾಘಾ ಗಡಿ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.ಮುಂಜಾಗೃತಾ ಕ್ರಮವಾಗಿ ಕಾಶ್ಮೀರದಲ್ಲಿ ಅಂತರ್ಜಾಲದ ಸೇವೆಯ ವೇಗವನ್ನು ಕಡಿಮೆ ಮಾಡಲಾಗಿದೆ.
ಅಭಿನಂದನ್ ಅವರನ್ನು ಹಸ್ತಾಂತರ ಮಾಡುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರಿ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಎರಡೂ ರಾಷ್ಟ್ರಗಳ ನಡುವೆ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದರಿಂದ ಜಮ್ಮು-ಕಾಶ್ಮೀರದ ಜನತೆ ಆತಂಕಕ್ಕೆ ಒಳಗಾಗಿತ್ತು. ಈಗ ಪರಿಸ್ಥಿತಿ ತಿಳಿಗೊಳ್ಳುತ್ತಿರುವುದರಿಂದ ಕಣಿವೆ ರಾಜ್ಯದ ಜನತೆ ಸ್ವಲ್ಪ ನಿಟ್ಟುಸಿರು ಬಿಟ್ಟಿದೆ.
ಅಭಿನಂದನ್ ಅವರನ್ನು ಹಸ್ತಾಂತರ ಮಾಡುತ್ತಿರುವುದ ಒಂದೊಳ್ಳೆಯ ನಿರ್ಧಾರ ಎಂದು ವಿಶ್ವಸಂಸ್ಥೆ ಪ್ರಶಂಸಿಸಿದೆ. ಇನ್ನು, ಅಭಿನಂದನ್ಗೆ ಸಂಬಂಧಿಸಿದ 11 ವಿಡಿಯೋಗಳನ್ನು ಯೂಟ್ಯೂಬ್ ಸಂಸ್ಥೆ ತನ್ನ ತಾಣದಿಂದ ತೆಗೆದು ಹಾಕಿದೆ. ಐಟಿ ಇಲಾಖೆಯ ಕೋರಿಕೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಬುಧವಾರ ಬೆಳಗ್ಗೆ ಪಾಕಿಸ್ತಾನದ ಜೆಟ್ ಎಫ್-16 ಯುದ್ಧವಿಮಾನ ಭಾರತ ವಾಯು ವಲಯ ಗಡಿಯನ್ನು ದಾಟಿದಾಗ ಭಾರತದ ಮಿಗ್-21 ವಿಮಾನವು ಅದನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಮಿಗ್-21 ವಿಮಾನ ಪತನಗೊಂಡಿತ್ತು. ವಿಮಾನದಿಂದ ಪ್ಯಾರಾಚೂಟ್ ಮೂಲಕ ಕೆಳಗಿಳಿದ ಅಭಿನಂದನ್ ಅವರನ್ನು ಪಾಕಿಸ್ತಾನ ಸೈನಿಕರು ಬಂಧಿಸಿದ್ದರು. ಅಭಿನಂದನ್ ಅವರ ಬಂಧನದ ನಂತರ ಎರಡು ದೇಶಗಳ ನಡುವಿನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತ್ತು. ಎಲ್ಲೆಡೆ ಹೈ ಅಲರ್ಟ್ ಘೋಷಿಸಲಾಗಿತ್ತು.
ಅಭಿನಂದನ್ ಅವರನ್ನು ಸುರಕ್ಷಿತವಾಗಿ ಮತ್ತು ಆದಷ್ಟು ಬೇಗ ಭಾರತಕ್ಕೆ ವಾಪಸ್ ಕಳುಹಿಸುವಂತೆ ಭಾರತ ಪಾಕಿಸ್ತಾನಕ್ಕೆ ಆಗ್ರಹಿಸಿತ್ತು. ಈ ಸಂಬಂಧ ನೆನ್ನೆ ಪಾಕ್ ಹೈ ಕಮಿಷನರ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.