ವಾಘ ಗಡಿ ಮೂಲಕ ಭಾರತಕ್ಕೆ ಅಭಿನಂದನ್ ಹಸ್ತಾಂತರ; ನಾಲ್ಕು ಗಂಟೆಗಳ ಕಾಲ ವಿಳಂಬ

ನವದೆಹಲಿ: ಭಾರತೀಯ ವಾಯುಪಡೆಯ ವಿಂಗ್‍ ಕಮಾಂಡರ್ ಅಭಿನಂದನ್‍ ವರ್ಧಮಾನ್‍ ಅವರನ್ನು ಪಾಕಿಸ್ತಾನ, ಭಾರತಕ್ಕೆ 4 ಗಂಟೆ ವಿಳಂಬವಾಗಿ ಹಸ್ತಾಂತರ ಮಾಡಿದೆ.

ಪಾಕಿಸ್ತಾನ ತನ್ನ ವಶದಲ್ಲಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ಇಂದು ಸುರಕ್ಷಿತವಾಗಿ ವಾಘಾ ಗಡಿಯಲ್ಲಿ ಭಾರತದ ಅಧಿಕಾರಿಗಳಿಗೆ ಹಸ್ತಾಂತರಿಸಿದೆ.

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕ್ ಅಧಿಕಾರಿಗಳ ಜೊತೆ ಭಾರತೀಯ ವಾಯುಸೇನೆ ಸಲಹೆಗಾರ ಜಿಟಿ ಕುರಿಯನ್ ಅವರು ಲಾಹೋರ್ ನಿಂದ ಅಟಾರಿ ವಾಘಾ ಗಡಿಗೆ ಕರೆತಂದಿದ್ದು, ಭಾರತೀಯ ಸೇನಾ ವರಿಷ್ಠರಿಗೆ, ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈ ಸಂದರ್ಭದಲ್ಲಿ ಅಭಿನಂದನ್ ಪೋಷಕರು ಕೂಡಾ ಹಾಜರಿದ್ದರು.

ವಾಘಾ ಗಡಿಯಲ್ಲಿ ಐಎಎಫ್ ಅಧಿಕಾರಿಗಳು, ಸೇರಿ ಸಾವಿರಾರು ಜನರು ವೀರಪುತ್ರ ಅಭಿನಂದನ್ ಅವರಿಗೆ ಅದ್ಧೂರಿ ಸ್ವಾಗತ ನೀಡಿದರು.

ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ಬರೊಬ್ಬರಿ 4 ಗಂಟೆ ವಿಳಂಬವಾಗಿದ್ದು, ಪಾಕಿಸ್ತಾನಿ ಗಡಿ ಅಧಿಕಾರಿಗಳು ಕಾಗದ ಪತ್ರ ಪರಿಶೀಲನೆಗೆ ಸುಧೀರ್ಘ ಸಮಯ ತೆಗೆದುಕೊಂಡಿದ್ದೇ ಅಭಿನಂದನ್ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗಲು ಕಾರಣ ಎನ್ನಲಾಗಿದೆ.

ಹಸ್ತಾಂತರ ಬಳಿಕ ಅಭಿನಂದನ್ ಅವರನ್ನು ಅಮೃತಸರಕ್ಕೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಆ ನಂತರ ಐಎಫ್ಎಫ್ ವಿಮಾನದ ಮೂಲಕ ನವದೆಹಲಿಗೆ ಕರೆದೊಯ್ಯಲಾಗುತ್ತಿದೆ.

IAF Pilot Abhinandan returns

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ