ಬೆಂಗಳೂರು, ಮಾ.1- ಒಡಿಶಾದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ನಂದಿನಿಲೇಔಟ್ ಠಾಣೆ ಪೆÇಲೀಸರು ಬಂಧಿಸಿ 11ಕೆಜಿ ತೂಕದ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ನಂದಿನಿಲೇಔಟ್ ಠಾಣೆ ವ್ಯಾಪ್ತಿಯ ಕೂಲಿನಗರ ಮತ್ತು ಲಕ್ಷ್ಮಿದೇವಿನಗರದಲ್ಲಿ ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆಂಬ ಖಚಿತ ವರ್ತಮಾನದ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.
ಆಸ್ಟಿನ್ಟೌನ್ನ ಶ್ರೀನಿವಾಸ (33), ಬರ್ನಾಡ್ ರಾಜ್ (31), ಉಲ್ಲಾಳ ಉಪನಗರದ ಸಂಗೀತ್ ಕುಮಾರ್ (32), ಶ್ರೀರಾಮಪುರದ ಸತೀಶ್ (26), ಅಗ್ರಹಾರ ದಾಸರಹಳ್ಳಿಯ ಬೈರೇಗೌಡ (27) ಹಾಗೂ ವೈಟ್ಫೀಲ್ಡ್ನ ನಾರಾಯಣ (35) ಬಂಧಿತ ಆರೋಪಿಗಳು.
ಬಂಧಿತರಿಂದ 11.150 ಕೆಜಿ ತೂಕದ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಒಡಿಶಾ ರಾಜ್ಯದಿಂದ ಗಾಂಜಾವನ್ನು ಖರೀದಿಸಿಕೊಂಡು ಬಂದು ಬೆಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದುದ್ದಾಗಿ ಒಪ್ಪಿಕೊಂಡಿದ್ದಾರೆ.
ಮಲ್ಲೇಶ್ವರಂ ಉಪವಿಭಾಗದ ಎಸಿಪಿ ಧನಂಜಯ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಲೋಹಿತ್ ಹಾಗೂ ಪಿಎಸ್ಐ ನರಸಿಂಹರಾಜು ಅವರನ್ನೊಳಗೊಂಡ ತಂಡ ಈ ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.