ನವದೆಹಲಿ: ಎಲ್ ಒ ಸಿ ದಾಟಿ ಭಾರತೀಯ ವಾಯುಪಡೆಗಳು ಪಾಕಿಸ್ತಾನಕ್ಕೆ ನುಗ್ಗಿ ವೈಮಾನಿಕ ದಾಳಿ ನಡೆಸಿ ಉಗ್ರರ ನೆಳೆಗಳನ್ನು ಧ್ವಂಸಗೊಳಿಸಿದ ಬೆನ್ನಲ್ಲೇ ಭಾರತ-ಪಾಕಿಸ್ತಾಮ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಉಭಯ ದೇಶಗಳ ನಡುವೆ ಯುದ್ಧದ ಕಾರ್ಮೋಡ ಕವಿದಿದೆ.
ಈಗಾಗಲೇ ಪಾಕಿಸ್ತಾನದ ವಶದಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ಬಿಡುಗಡೆ ಮಾಡಬೇಕೆಂದರೆ ಭಾರತ ಮಾತುಕತೆಗೆ ಬರಬೇಕೆಂದು ಬೇಡಿಕೆ ಇಡುವ ಮೂಲಕ ಪಾಕಿಸ್ತಾನ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದೆ.
ಎರಡು ದಿನಗಳ ವೈಮಾನಿಕ ದಾಳಿಗಳ ನಂತರ ಗುರುವಾರ ರಾಜತಾಂತ್ರಿಕ ಮಟ್ಟದ ಕಲಹಗಳು ಶುರುವಾಗಿವೆ. ಇದರ ಬೆನ್ನಲ್ಲೇ ಎರಡೂ ದೇಶಗಳಲ್ಲಿ ತುರ್ತು ಸಭೆಗಳು ನಿರಂತರವಾಗಿ ನಡೆಯುತ್ತಿವೆ. ಉದ್ವಿಗ್ನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಪಾಕಿಸ್ತಾನ ಸಂಝೌತಾ ಎಕ್ಸ್ಪ್ರೆಸ್ ರೈಲು ರದ್ದುಪಡಿಸಿದೆ.
ಈ ನಡುವೆ ಪಾಕ್ ವಶದಲ್ಲಿರುವ ಅಭಿನಂದನ್ ವರ್ಧಮಾನ್ ಅವರನ್ನು ವಾಪಸ್ ಕರೆತರುವಂತೆ ಆಗ್ರಹಿಸಿ ಆನ್ಲೈನ್ ಅಭಿಯಾನ ಆರಂಭವಾಗಿದೆ.
ಅಭಿನಂದನ್ ಅವರನ್ನು ವಾಪಸ್ ಕರೆತರಲು ಮೋದಿಯವರು ಮಾತುಕತೆ ನಡೆಸಬೇಕು ಎಂಬ ಅಭಿಪ್ರಾಯವೂ ನೆಟ್ಟಿಗರಿಂದ ವ್ಯಕ್ತವಾಗಿದೆ. ಈ ಮಧ್ಯೆ, ಅಭಿನಂದನ್ ಸುರಕ್ಷಿತವಾಗಿ ವಾಪಸ್ ಬರಲೆಂದು ಪ್ರಾರ್ಥಿಸುವುದಾಗಿ ಕೆಲವರು ಹೇಳಿದ್ದಾರೆ.
ಪಾಕ್ನಲ್ಲಿ ಅಭಿನಂದನ್ ಅವರ ಬಂಧನದ ಸುದ್ದಿಯು ಚೆನ್ನೈನಲ್ಲಿ ನೆಲೆಸಿರುವ ಕುಟುಂಬದವರಿಗೆ ಆತಂಕ ಹೆಚ್ಚಿದ್ದು, ತಮ್ಮ ಮಗನನ್ನು ಕೂಡಲೇ ಕರೆತರಬೇಕೆಂದು ಪೋಷಕರು ಮತ್ತು ಸಂಬಂಧಿಕರು ಒತ್ತಾಯಿಸಿದ್ದಾರೆ.