ನವದೆಹಲಿ: ಭಾರತದ ವಾಯುಸೇನೆ ಪ್ರತಿದಾಳಿ ಬಳಿಕ ಚೀನಾ ಸೇರಿದಂತೆ ಯಾವ ರಾಷ್ಟ್ರವು ಪಾಕಿಸ್ತಾನ ಪರವಾಗಿ ಮಾತನಾಡಲಿಲ್ಲ ಎಂದು ಪಾಕ್ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ತಿಳಿಸಿದ್ದಾರೆ. ಇದೆ ವೇಳೆ ಪ್ರಪಂಚದಲ್ಲಿ ಉಗ್ರರಿಗೆ ಉಳಿಗಾಲವಿಲ್ಲ ಎನ್ನುವ ಸಂದರ್ಭ ಸೃಷ್ಟಿಯಾಗಿದೆ. ಭಯೋತ್ಪಾದನ ಕೃತ್ಯಗಳು ಜನರ ತಾಳ್ಮೆಯನ್ನು ಪರೀಕ್ಷಿಸುತ್ತಿವೆ. ಇದಕ್ಕೆ ಸಾಕ್ಷಿಯೇ ಪಾಕ್ ಬೆಂಬಲಕ್ಕೆ ಯಾರು ನಿಲ್ಲದಿರುವುದು ಎಂದು ಹಕ್ಕಾನಿ ಹೇಳಿದರು.
ಪುಲ್ವಾಮಾ ದಾಳಿ ಬಳಿಕ ಕೆಂಡದಂತೆ ಕಾರುತ್ತಿದ್ದ ಭಾರತ, ಸರಿಯಾಗಿ 12ನೇ ದಿನಕ್ಕೆ ಪಾಕ್‌ನ ಹುಟ್ಟಡಗಿಸಿದೆ. 40 ಯೋಧರ ಬಲಿದಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹಾತೊರೆಯುತ್ತಿದ್ದ ಭಾರತೀಯ ವಾಯುಪಡೆ, ಗಡಿ ನಿಯಂತ್ರಣ ರೇಖೆ ದಾಟಿ ಪಾಕ್‌ನ ಮೂರು ಉಗ್ರರ ಕ್ಯಾಂಪ್‌ಗಳ ಮೇಲೆ ದಾಳಿ ನಡೆಸಿದೆ.
ಪಾಕ್ ಮತ್ತು ಭಾರತ ನಡುವೆ 1971 ರಲ್ಲಿ ಯುದ್ಧ ನಡೆದಿತ್ತು. ಇಲ್ಲಿ ಭಾರತೀಯ ವಾಯುಪಡೆ ಎಲ್‌ಒಸಿ ದಾಟಿ ಪಾಕ್ ಮೇಲೆ ದಾಳಿ ಮಾಡಿತ್ತು. ಆದಾದ ಬಳಿಕ ಇಂತಹ ಸಾಹಸಕ್ಕೆ ಎಂದೂ ಕೈ ಹಾಕಿರಲಿಲ್ಲ. ವಾಜಪೇಯಿ ಕಾಲದಲ್ಲಿ ನಡೆದಿದ್ದ 1999ರ ಕಾರ್ಗಿಲ್ ಯುದ್ಧದಲ್ಲೂ ಎಲ್‌ಓಸಿ ದಾಟಿರಲಿಲ್ಲ. ಆದರೆ, ಈ ಬಾರಿ 40 ಯೋಧರ ಬಲಿದಾನದಿಂದ ಕುದಿಯುತ್ತಿದ್ದ ಸೇನೆ ಎಲ್‌ಒಸಿ ದಾಟಿ ಪಾಕ್‌ಗೆ ತಕ್ಕಪಾಠ ಕಲಿಸಿದೆ.
ಈ ಹಿಂದೆಯೂ ಕಾಶ್ಮೀರ ವಿಮೋಚನೆಗೆ ಪಾಕಿಸ್ತಾನ ರೂಪಿಸಿದ್ದ ತಂತ್ರದಲ್ಲಿ ಭಾಗಿಯಾಗಿದ್ದ ಉಗ್ರರ ಗುಂಪುಗಳೇ ಈಗ ಪಾಕ್ ಮುಳುವಾಗಿದೆ ಎಂದಿದ್ದರು ಹುಸೇನ್ ಹಕ್ಕಾನಿ. ಲಾಹೋರ್ನಲ್ಲಿ ನಡೆದ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ಮಾಜಿ ರಾಯಭಾರಿ ಹಕ್ಕಾನಿ, ಪಾಕಿಸ್ತಾನದ ದಶಕಗಳ ಹಿಂದಿನಷ್ಟು ಯೋಜನೆ ಈಗ ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿವೆ. ಎಲ್ಲಾ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ಮಾಡಲೇ ಬೇಕಾದ ಸ್ಥಿತಿ ಎದುರಾಗಿದೆ ಎಂದು ಅಭಿಪ್ರಾಯಪಟ್ಟಿದ್ದರು.
ಇನ್ನು ಉಗ್ರರ ಗುಂಪುಗಳೊಂದಿಗೆ ಪಾಕಿಸ್ತಾನದ ನಂಟು ಮೊದಲ ಹಂತದಲ್ಲಿ ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದ ಕಾರ್ಯತಂತ್ರದ ಭಾಗವಾಗಿತ್ತು. ಆದರೆ ಇದು ಪಾಕಿಸ್ತಾನಕ್ಕೆ ಫಲ ನೀಡುವ ಬದಲು ಪಾಕಿಸ್ತಾನಕ್ಕೆ ಮುಳುವಾಗಿ ಪರಿಣಮಿಸಿದೆ ಎಂದು ಹಕ್ಕಾನಿ ಪಿಬಿಎಸ್ಗೆ ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು.
ತನಗೇ ಕಂಟಕವಾಗಿ ಪರಿಣಮಿಸಿದ್ದರೂ ಸಹ ಪಾಕಿಸ್ತಾನ ಉಗ್ರರ ಗುಂಪುಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಆಯ್ಕೆ ಮಾಡಿಕೊಳ್ಳುತ್ತಿದೆ. ಆದ್ದರಿಂದಲೇ ಉಗ್ರರು ಶಿಯಾ, ಅಹ್ಮದಿಗಳು, ಕ್ರೈಸ್ತರ ವಿರುದ್ಧ ಮಾತ್ರ ದಾಳಿ ನಡೆಸುತ್ತಿದ್ದಾರೆ ಎಂದು ಹುಸೇನ್ ಹಕ್ಕಾನಿ ಹೇಳಿಕೆ ನೀಡಿದ್ದರು. ಇದಕ್ಕೆ ಪಾಕಿಸ್ತಾನದಿಂದ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.