ರೈತರಿಗೆ ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಹಣ-ಕರ್ನಾಟಕ ಹಾಲು ಮಹಾಮಂಡಳಿ

ಬೆಂಗಳೂರು, ಫೆ.27- ಭೀಕರ ಬರಗಾಲದಿಂದ ತತ್ತರಿಸಿರುವ ನಾಡಿನ ಅನ್ನದಾತನ ಸಂಕಷ್ಟಕ್ಕೆ ನೆರವಾಗುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಪ್ರತಿ ಲೀಟರ್ ಹಾಲಿಗೆ 2 ರೂ. ಹೆಚ್ಚುವರಿ ಹಣ ನೀಡಲು ತೀರ್ಮಾನಿಸಿದೆ.

ಬರುವ ಮಾ.1ರ ಶುಕ್ರವಾರದಿಂದಲೇ ಪ್ರತಿ ಲೀಟರ್ ಹಾಲಿಗೆ ಕೆಎಂಎಫ್ ಹೆಚ್ಚುವರಿಯಾಗಿ 2 ರೂ. ನೀಡಲಿದ್ದು, ರಾಜ್ಯಾದ್ಯಂತ ಇದು ಜಾರಿಯಾಗಲಿದೆ.

ಇತ್ತೀಚೆಗೆಷ್ಟೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಬಜೆಟ್‍ನಲ್ಲಿ ಹಾಲಿಗೆ ನೀಡಲಾಗುತ್ತಿರುವ ಪ್ರೋತ್ಸಹ 4ರಿಂದ 5 ರೂ.ಗೆ ಏರಿಕೆ ಮಾಡುವುದಾಗಿ ಪ್ರಕಟಿಸಿದ್ದರು.

ಸರ್ಕಾರ ಒಂದು ಲೀಟರ್‍ಗೆ ಪ್ರೋತ್ಸಹ ಧನವಾಗಿ 1 ರೂ. ಹೆಚ್ಚಳ ಮಾಡಿತ್ತು. ಈಗ ಕೆಎಂಎಫ್ 2 ರೂ. ಹೆಚ್ಚಳ ಮಾಡುವುದರಿಂದ 1 ಲೀಟರ್‍ಗೆ ಪ್ರೋತ್ಸಹ ಫಲಾನುಭವಿಗಳಿಗೆ 7 ರೂ. ಸಿಗಲಿದೆ.

ರಾಜ್ಯ ಸರ್ಕಾರ ಬಜೆಟ್‍ನಲ್ಲಿ ಘೋಷಣೆ ಮಾಡಿದ್ದ ಪ್ರೋತ್ಸಹ ಧನ ಏ.1ರಿಂದ ಜಾರಿಯಾದರೆ ಕೆಎಂಎಫ್ ಪ್ರೋತ್ಸಹ ಮಾರ್ಚ್ 1ರ ಶುಕ್ರವಾರದಿಂದಲೇ ಜಾರಿಗೆ ಬರಲಿದೆ.

ರಾಜ್ಯದಲ್ಲಿ ಈ ಬಾರಿ ಕೆಎಂಎಫ್ ನಿರೀಕ್ಷೆಗೂ ಮೀರಿ ಹಾಲು ಉತ್ಪಾದನೆ ಮಾಡಿದೆ. ಪ್ರತಿದಿನ 85 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುವ ಗುರಿಯನ್ನು ಹೊಂದಲಾಗಿತ್ತು.

ಈ ಬಾರಿ ರಾಜ್ಯದ 140ಕ್ಕೂ ಹೆಚ್ಚು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದರೂ ಹಾಲು ಉತ್ಪಾದನೆಗೆ ಯಾವುದೇ ರೀತಿಯ ಸಮಸ್ಯೆಯಾಗಿಲ್ಲ.

ಪ್ರತಿದಿನ ಸರಾಸರಿ 64 ಲಕ್ಷ ಲೀಟರ್‍ನಿಂದ 75 ಲಕ್ಷದವರೆಗೆ ಹಾಲು ಉತ್ಪಾದನೆಯಾಗುತ್ತದೆ. ಗ್ರಾಹಕರಿಂದ ಖರೀದಿಸಿದ ಹಾಲನ್ನು ಹೊರರಾಜ್ಯ, ವಿದೇಶ ರಫ್ತು ಮಾಡುವ ಜೊತೆಗೆ ತುಪ್ಪ ಮತ್ತು ಸಿಹಿ ತಿನಿಸುಗಳನ್ನು ಕೆಎಂಎಫ್ ಉತ್ಪಾದನೆ ಮಾಡುವುದರಿಂದ ಲಾಭಾಂಶವೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.

ಸರ್ಕಾರಿ ಶಾಲೆ ಮಕ್ಕಳಿಗೆ ಕ್ಷೀರ ಭಾಗ್ಯ, ಹಾಲಿನ ಪೌಡರ್ ಉತ್ಪಾದನೆ ಜೊತೆಗೆ ನಂದಿನಿ ತುಪ್ಪ, ತಿರುಪತಿ ಲಡ್ಡು ಹಾಗೂ 22 ಬಗೆಯ ಐಸ್‍ಕ್ರೀಂತಯಾರಿಕೆ ಸೇರಿದಂತೆ ನಾನಾ ರೀತಿಯ ವಹಿವಾಟನ್ನು ನಡೆಸುತ್ತಿದೆ.

ಈ ವರ್ಷ ಕೆಎಂಎಫ್ 16,000 ಕೋಟಿ ವಹಿವಾಟು ನಡೆಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.25ರಷ್ಟು ಪ್ರತಿಶತ ಲಾಭಾಂಶವಾಗಿದೆ ಎಂದು ಕೆಎಂಎಫ್ ಮೂಲಗಳು ತಿಳಿಸಿವೆ.

ಈ ಬಾರಿ ಬರಗಾಲ ಆವರಿಸಿರುವುದರಿಂದ ರೈತ ಸಂಕಷ್ಟದಲ್ಲಿ ಪರದಾಡುತ್ತಿದ್ದಾನೆ. ಹೆಚ್ಚುವರಿ ಲಾಭಾಂಶವನ್ನು ಫಲಾನುಭವಿಗಳಿಗೆ ಪ್ರೋತ್ಸಹ ಮೂಲಕ ನೀಡಲು ಮುಂದಾಗಿ ಕೆಎಂಎಫ್ ಮಾನವೀಯತೆ ಮೆರೆದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ