ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪರ್ಧೆ?

ಬೆಂಗಳೂರು, ಫೆ.27- ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ದಿ.ಅನಂತ್‍ಕುಮಾರ್ ಅವರ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಆದರೆ ಯಾವ ಕ್ಷೇತ್ರದಿಂದ ಅವರು ಸ್ಪರ್ಧಿಸುತ್ತಾರೆ ಎಂಬುದು ಇನ್ನೂ ಖಚಿತವಾಗಬೇಕಿದ್ದು, ಎಲ್ಲಾ ನಿರ್ಣಯ ಈಗ ಬಿ.ಎಸ್.ಯಡಿಯೂರಪ್ಪನವರ ಕೈಯಲ್ಲಿ ಇದೆ. ಒಂದು ವೇಳೆ ನಿರ್ಮಲಾ ಸೀತಾರಾಮನ್ ರವರು ಬೆಂಗಳೂರಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದಲ್ಲಿ ಈ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯಲಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ ಕುಮಾರ್ ಕಣಕ್ಕಿಳಿಸಲು ಪಕ್ಷ ತೀರ್ಮಾನಿಸಿದೆ. ಆದರೆ ಈ ಬಗ್ಗೆ ತೇಜಸ್ವಿನಿ ಅನಂತಕುಮಾರ್ ಅವರು ಸ್ಪರ್ಧಿಸುವ ಬಗ್ಗೆ ಸ್ಪಷ್ಟ ತೀರ್ಮಾನ ಪ್ರಕಟಿಸದಿರುವುದು ಬಿಜೆಪಿಯನ್ನು ಚಿಂತೆಗೀಡು ಮಾಡಿದೆ.

ಹೀಗಾಗಿ ಈ ಕ್ಷೇತ್ರದಿಂದ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸುವ ಬೆಂಗಳೂರು ದಕ್ಷಿಣದಲ್ಲಿ 7ನೇ ಬಾರಿಗೆ ಬಿಜೆಪಿ ಕೇಸರಿ ಬಾವುಟ ಹಾರಿಸಲು ರಣತಂತ್ರ ರೂಪಿಸಿದೆ.

ನಿರ್ಮಲ ಸೀತಾರಾಮನ್ ರವರು ರಕ್ಷಣಾ ಸಚಿವೆಯಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಕೆಲವರು ಇವರ ಕೈಯಲ್ಲಿ ದೇಶದ ರಕ್ಷಣೆ ಸಾಧ್ಯವಿಲ್ಲ ಎಂಬ ಮಾತನ್ನು ಆಡಿದ್ದರು. ಆದರೆ ಯಾರೂ ಊಹಿಸದ ರೀತಿಯಲ್ಲಿ ದೇಶದ ರಕ್ಷಣಾ ವ್ಯವಸ್ಥೆಯನ್ನು ಬಹಳ ಅತ್ಯುತ್ತಮವಾಗಿ ಮುನ್ನಡೆಸುತ್ತಿರುವುದರಿಂದ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.

ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ನಂತರ ಮಹಿಳೆಯೊಬ್ಬರು ದೇಶದ ಪೂರ್ಣಾವಧಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿಶ್ವದಲ್ಲಿಯೇ ನಾಲ್ಕನೇ ಅತಿದೊಡ್ಡ ಸೇನೆಯನ್ನು ಹೊಂದಿರುವ ಭಾರತದ ರಕ್ಷಣಾ ವ್ಯವಸ್ಥೆಯನ್ನು ಬಹಳ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಕೆಲವೇ ಕೆಲವು ವರ್ಷಗಳ ಹಿಂದೆ ಸೇಲ್ಸ್ ಗರ್ಲ್ ಆಗಿ ಕೆಲಸ ಮಾಡಿದ್ದ ನಿರ್ಮಲಾ ಸೀತಾರಾಮನ್ ರವರು ಇಂದು ಭಾರತದ ರಕ್ಷಣಾ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆದರೆ ಮೊದಲಿನಿಂದಲೂ ಚುನಾವಣೆಯಲ್ಲಿ ಗೆದ್ದು ಬಂದಿಲ್ಲ ಎಂಬ ಹಲವಾರು ಟೀಕೆಗಳನ್ನು ನಿರ್ಮಲಾ ಸೀತಾರಾಮನ್ ರವರು ಎದುರಿಸಿದ್ದರು. ರಾಜ್ಯಸಭೆಗೆ ಕರ್ನಾಟಕ ರಾಜ್ಯದಿಂದ ಆಯ್ಕೆಯಾಗಿದ್ದರೂ ಸಹ ಯಾವುದೇ ಜನಮತ ಇವರನ್ನು ರಕ್ಷಣಾ ಸಚಿವೆಯಾಗಿ ಮಾಡಿಲ್ಲ ಎಂಬ ಟೀಕೆಗಳು ಕೇಳಿ ಬಂದಿವೆ.

ಕರ್ನಾಟಕದ ಹಲವು ಸಂಸದರು ಹಾಗೂ ಬಿಜೆಪಿ ನಾಯಕರು ನಿರ್ಮಲಾ ಸೀತಾರಾಮನ್ ರವರನ್ನು ಕರ್ನಾಟಕದಿಂದ ಕಣಕ್ಕಿಳಿಸಲು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೊದಲು ಕೇರಳದ ತಿರುವಂತನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಶಶಿ ತರೂರ್ ಅವರ ಎದುರಾಳಿಯಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ರಣತಂತ್ರ ರೂಪಿಸಲಾಗಿತ್ತು. ಆದರೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಒಬ್ಬರು ಖ್ಯಾತನಾಮರ ಅವಶ್ಯಕತೆ ಇರುವ ಕಾರಣ ನಿರ್ಮಲಾ ಸೀತಾರಾಮನ್ ರವರು ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸ್ಪರ್ಧಿಸಬೇಕು ಎಂಬ ಮಾತು ಕೇಳಿಬರುತ್ತಿದೆ.

ಸುಮಲತಾ ಕರೆತರುವ ಪ್ರಯತ್ನ:
ಬೆಂಗಳೂರಿನ ಪ್ರಭಾವಿ ಶಾಸಕರೊಬ್ಬರು ಪಕ್ಷದ ನಾಯಕರ ನಿಯೋಗದ ಜೊತೆ ಆರ್‍ಎಸ್‍ಎಸ್ ನಾಯಕರನ್ನು ಭೇಟಿಯಾಗಿ ತೇಜಸ್ವಿನಿ ಅನಂತಕುಮಾರ್ ಅವರ ಬದಲಿಗೆ ಸುಮಲತಾ ಅಂಬರೀಶ್‍ರನ್ನು ಪಕ್ಷಕ್ಕೆ ಕರೆತರುತ್ತೇವೆ. ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸೋಣ ಎಂಬ ಸಲಹೆ ನೀಡಿದ್ದಾರೆ.

ಸುಮಲತಾ ಅಂಬರೀಶ್ ಅವರು ರಾಜಕೀಯಕ್ಕೆ ಬರುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಮಂಡ್ಯದಿಂದ ಕಣಕ್ಕಿಳಿಯಲು ಅವರು ಬಯಸಿದ್ದಾರೆ. ಆದರೆ,ಯಾವ ಪಕ್ಷದಿಂದ ಎಂಬುದು ಇನ್ನು ಖಚಿತವಾಗಿಲ್ಲ.

ತೇಜಸ್ವಿನಿ ಅನಂತ ಕುಮಾರ್ ಸ್ಪರ್ಧೆಗೆ ಒತ್ತಡ:
ಕೇಂದ್ರ ಸಚಿವ ಅನಂತಕುಮಾರ್ ನಿಧನದ ಬಳಿಕ ತೇಜಸ್ವಿನಿ ಅನಂತ ಕುಮಾರ್ ಅವರು ಬೆಂಗಳೂರು ದಕ್ಷಿಣ ಕೇತ್ರದಿಂದ ಅಭ್ಯರ್ಥಿಯಾಗಬೇಕು ಎಂಬ ಅಭಿಪ್ರಾಯ ಬಿಜೆಪಿಯಲ್ಲಿ ವ್ಯಕ್ತವಾಯಿತು. ಅನಂತಕುಮಾರ್ ಅವರ ಅಭಿಮಾನಿಗಳು ಸಹ ತೇಜಸ್ವಿನಿ ಅವರು ಕಣಕ್ಕಿಳಿಯಬೇಕೆಂದು ಒತ್ತಡ ಹಾಕಿದ್ದು, ಹಲವು ಬಿಜೆಪಿ ನಾಯಕರು ಸಹ ಇದಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಯಾರು? ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಬಾರಿ ನಂದನ್ ನಿಲೇಕಣಿ ಅಥವಾ ಮೋಹನದಾಸ್ ಪೈ ಅವರನ್ನು ಕಣಕ್ಕಿಳಿಸಬಹುದು ಎಂಬ ಚರ್ಚೆ ನಡೆಯುತ್ತಿದೆ.

1996ರಿಂದ 2014ರ ತನಕ ಅನಂತ ಕುಮಾರ್ ಅವರು ಸತತವಾಗಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಬೆಂಗಳೂರು ದಕ್ಷಿಣ ಎಂದರೆ ಬಿಜೆಪಿಯ ಭದ್ರಕೋಟೆ. ಈ ಬಾರಿಯ ಚುನಾವಣೆಯಲ್ಲೂ ಕ್ಷೇತ್ರವನ್ನು ಉಳಿಸಿಕೊಳ್ಳುವ ಹೊಣೆ ಬಿಜೆಪಿ ನಾಯಕರ ಮೇಲಿದೆ. ಆದ್ದರಿಂದ, ತೇಜಸ್ವಿನಿ ಅನಂತ ಕುಮಾರ್ ಇಲ್ಲವೇ ನಿರ್ಮಲ ಸೀತಾರಾಮನ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ