ಬೆಂಗಳೂರು, ಫೆ.27- ಮಹಾರಾಣಿ ಕಾಲೇಜಿನ ಆವರಣದಲ್ಲಿ ಆಸ್ಪತ್ರೆ ಹಾಗೂ ಹಾಸ್ಟೆಲ್ ನಿರ್ಮಾಣ ಸಂಬಂಧ ಮುಖ್ಯಮಂತ್ರಿಗಳು ನೀಡಿದ ಸೂಚನೆಯಂತೆ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಿಳಿಸಿದರು.
ನಗರದ ಮಹಾರಾಣಿ ಕಾಲೇಜಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆಸ್ಪತ್ರೆ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿಗಳು ಹೇಳಿದ್ದರು. ಅದರಂತೆ ನಾವು ಸ್ಥಳ ಪರಿಶೀಲನೆಗೆ ಬಂದಿದ್ದೇವೆ. ಕಾಲೇಜಿನಲ್ಲಿ 7 ಸಾವಿರ ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದು, 10 ಸಾವಿರ ವಿದ್ಯಾರ್ಥಿನಿಯರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೂಲಸೌಲಭ್ಯ ಒದಗಿಸುವುದು ಸೇರಿದಂತೆ ಕಾಲೇಜು ಕಟ್ಟಡ ದುರಸ್ತಿ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ ಎಂದರು.
ಮಹಾರಾಣಿ ಕಾಲೇಜಿನಲ್ಲಿ ಸ್ವಚ್ಛತೆಯನ್ನು ನಿರ್ವಹಣೆ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಇಲ್ಲಿ ನಡೆಯಬೇಕಿರುವ ಕಾಮಗಾರಿಗಳ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಆದಷ್ಟು ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಇಷ್ಟೇ ಸೀಟುಗಳು ಬೇಕೆಂಬ ಪಟ್ಟು ಇಲ್ಲ:
ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷದಲ್ಲಿ ಒಂದಾಗಿರುವ ಜೆಡಿಎಸ್ಗೆ ಇಷ್ಟೇ ಸೀಟು ಬೇಕೆಂದು ಕೇಳಿಲ್ಲ. ಆದರೆ ಯಾವ ಕ್ಷೇತ್ರದಲ್ಲಿ ಯಾವ ಪಕ್ಷ ಪ್ರಬಲವಾಗಿದೆ ಎಂಬುದನ್ನು ತಿಳಿದು ಸೀಟು ಹಂಚಿಕೆಗೆ ಮುಂದಾಗಿದ್ದೇವೆ ಎಂದರು.
6,8,12 ಹೀಗೆ ಎಷ್ಟು ಸೀಟು ಸಿಗುತ್ತದೆ ಎಂಬುದು ಗೊತ್ತಿಲ್ಲ. ಎರಡು ಹೆಚ್ಚಾದರೂ ಸರಿ, ಎರಡು ಕಡಿಮೆಯಾದರೂ ಸರಿ. ಮುಂದಿನ ಒಂದು ವಾರದಲ್ಲಿ ಸೀಟು ಹಂಚಿಕೆ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.