ಯಾವುದೇ ಸಂದರ್ಭದಲ್ಲಿ ಪಾಕಿಸ್ತಾನದಿಂದ ಪ್ರತಿಕಾರ ದಾಳಿ-ಗಡಿ ಪ್ರದೇಶದಲ್ಲಿ ಸೇನೆ ಸಜ್ಜಾಗಿರುವಂತೆ ಸೂಚನೆ

ನವದೆಹಲಿ, ಫೆ.27- ಪಾಕಿಸ್ತಾನದಿಂದ ಯಾವುದೇ ಸಂದರ್ಭದಲ್ಲಿ ಪ್ರತಿಕಾರ ದಾಳಿ ನಡೆಯಬಹುದಾದ ಕಾರಣ ಗಡಿ ಪ್ರದೇಶದಲ್ಲಿ ಸೇನೆ ಎಲ್ಲ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕೆಂದು ಕೇಂದ್ರ ಸರ್ಕಾರ ಸೂಚನೆ ಕೊಟ್ಟಿದೆ.

ಇಂದು ಬೆಳಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಮೂರು ಸೇನಾಪಡೆಗಳ ಮುಖ್ಯಸ್ಥರು, ಗುಪ್ತಚರ ವಿಭಾಗ, ರಾ, ರಾಷ್ಟ್ರೀಯ ಭದ್ರತಾ ಸಲಹೆಗಾರರು ಸೇರಿದಂತೆ ಹಲವು ಅಧಿಕಾರಿಗಳ ಜೊತೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು.

ಬಳಿಕ ಜಮ್ಮುಕಾಶ್ಮೀರದ ರಜೌರಿ, ಬುದ್ಗಾವ್, ಪುಲ್ವಾಮ, ನೌಶೇರಾ, ಪೂಂಚ್ ಸೇರಿದಂತೆ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಸೇನಾಪಡೆಯನ್ನು ಇನ್ನಷ್ಟು ನಿಯೋಜಿಸುವಂತೆ ರಕ್ಷಣಾ ಪಡೆ ಮುಖ್ಯಸ್ಥರಿಗೆ ಸೂಚಿಸಿದರು.

ಜಮ್ಮುಕಾಶ್ಮೀರ, ಪಂಜಾಬ್, ರಾಜಸ್ಥಾನ, ಉತ್ತರಖಂಡ್ ಸೇರಿದಂತೆ ಪಾಕ್ ಗಡಿ ಹೊಂದಿರುವ ರಾಜ್ಯಗಳಲ್ಲಿ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಳ್ಳಬೇಕೆಂದು ತಾಕೀತು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಸೇನಾಪಡೆ ಸರ್ಪಗಾವಲು ಹಾಕಿದೆ.

ಪಾಕ್‍ನಿಂದ ಸಂಭಾವ್ಯ ದಾಳಿ ನಡೆದರೂ ಅದಕ್ಕೆ ಪ್ರತ್ಯುತ್ತರ ನೀಡಬೇಕು. ದಿನದ 24 ಗಂಟೆಗಳ ಕಾಲವೂ ಸರ್ವ ಸನ್ನದ್ಧವಾಗಿರಬೇಕೆಂದು ಸೂಚಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ