ನವದೆಹಲಿ, ಫೆ.27-ಸಂಸತ್ತಿನ ಬುದ್ಧಿವಂತರ ಸದನ ಎಂದೇ ಪರಿಗಣಿತವಾದ ರಾಜ್ಯಸಭೆಯಲ್ಲಿ ಪೂರಕ ವಿಷಯಗಳ ಚರ್ಚೆ ಮತ್ತು ಉತ್ಪಾದಕತೆ ಕೊರತೆಗಾಗಿ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇದು ಕಳವಳಕಾರಿ ಸಂಗತಿ ಎಂದು ವಿಷಾದಿಸಿದ್ದಾರೆ.
ಪಾರ್ಲಿಮೆಂಟ್ನ ಮೇಲ್ಮನೆಯ ಉತ್ಪಾದಕತೆ ಕೊರತೆ ಬಗ್ಗೆ ವಿರೋಧ ಪಕ್ಷಗಳನ್ನು ಪ್ರಶ್ನಿಸುವಂತೆ ಪ್ರಧಾನಿ ಮೋದಿ ಯುವ ಜನತೆಗೆ ಕರೆ ನೀಡಿದ್ದಾರೆ.
ದೆಹಲಿ ವಿಜ್ಞಾನಭವನದಲ್ಲಿ ಇಂದು ನಡೆದ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಮಾತನಾಡಿದ ಅವರು, ರಾಜ್ಯಸಭೆಯಲ್ಲಿ ಆಡಳಿತ ಪಕ್ಷಕ್ಕಿಂತಲೂ ವಿರೋಧ ಪಕ್ಷಗಳ ಸದಸ್ಯರ ಸಂಖ್ಯೆಯು ಹೆಚ್ಚಾಗಿದೆ. ಆದರೂ ಅಲ್ಲಿ ನಿರೀಕ್ಷಿತ ಮಟ್ಟದ ಉತ್ಪಾದಕತೆ ಕಂಡುಬಂದಿಲ್ಲ. ಈ ಬಗ್ಗೆ ಮೇಲ್ಮನೆ ಸದಸ್ಯರನ್ನು ಯುವ ಜನತೆ ಪ್ರಶ್ನಿಸಬೇಕು. ಇದು ಅವರ ಮೇಲೆ ದೇಶವ್ಯಾಪಿ ಒತ್ತಡಕ್ಕೆ ಕಾರಣವಾಗುತ್ತದೆ ಎಂದರು.
ಸಂಸತ್ತಿನ 16ನೇ ಲೋಕಸಭೆಯಲ್ಲಿ ಸರ್ಕಾರ ದೊಡ್ಡ ಬಹುಮತ ಹೊಂದಿದೆ. ಕೆಳಮನೆಯಲ್ಲಿ 205 ಮಸೂದೆಗಳನ್ನು ಮಂಡಿಸಲಾಗಿದ್ದು, ಶೇ.85ರಷ್ಟು ಉತ್ಪಾದಕತೆ ಕಂಡುಬಂದಿದೆ. ಆದರೆ ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ಸಂಖ್ಯೆ ಹೆಚ್ಚಾಗಿದ್ದರೂ, ಮಧ್ಯಂತರ ಬಜೆಟ್ ಮಂಡಿಸಲಾದ ಕಳೆದ ಸಂಸತ್ ಅವೇಶನದಲ್ಲಿ ನಿರೀಕ್ಷಿತ ಉತ್ಪಾದಕತೆ ಕಂಡುಬಂದಿಲ್ಲ. ಅಲ್ಲಿ ಕೇವಲ ಶೇ.8ರಷ್ಟು ಮಾತ್ರ ಉತ್ಪಾದಕತೆ ಕಂಡುಬಂದಿದೆ ಎಂದು ಮೋದಿ ವಿಷಾದಿಸಿದರು.
2014ರ ಸಾರ್ವತ್ರಿಕ ಚುನಾವಣೆಗಳಲ್ಲಿ ಬಿಜೆಪಿ ಪೂರ್ಣ ಬಹುಮತ ದಕ್ಕಿಸಿಕೊಟ್ಟ ಮತದಾರರಿಗೆ ಪೂರಕವಾಗುವ ಅಭಿವೃದ್ಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸಿದೆ.
ನಿಮ್ಮ ರಾಜ್ಯಗಳಲ್ಲಿ ನೀವು(ಯುವಜನತೆ) ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಇಂಥ ಸಮಾರಂಭಗಳಿಗೆ ರಾಜ್ಯಸಭಾ ಸದಸ್ಯರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಈ ಬಗ್ಗೆ ಪ್ರಶ್ನಿಸಬೇಕೆಂದು ಮೋದಿ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ವಿಷಯಗಳ ಬಗೆ ಯುವಕ-ಯುವತಿಯರು ಕೇಳಿದ ಪ್ರಶ್ನೆಗಳಿಗೆ ಮೋದಿ ಉತ್ತರಿಸಿದರು.