ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ-ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸ್ಪರ್ಧೆಗೆ ಕಾರ್ಯಕರ್ತರ ಒತ್ತಾಯ

ಬೆಂಗಳೂರು, ಫೆ.27- ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸ್ಪರ್ಧಿಸುವಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಒತ್ತಾಯ ಕೇಳಿ ಬಂದಿರುವ ಹಿನ್ನಲೆಯಲ್ಲಿ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾಯ್ದು ನೋಡುವಂತಾಗಿದೆ.

ಬೆಂಗಳೂರಿನಲ್ಲಿ ಜೆಡಿಎಸ್‍ಗೆ ಭದ್ರ ಬುನಾದಿ ಹಾಕಲು ಬೆಂಗಳೂರಿನಲ್ಲೇ ದೇವೇಗೌಡರು ಸ್ಪರ್ಧಿಸಬೇಕು. ಹಾಸನ ಅಥವಾ ಮಂಡ್ಯದಲ್ಲಿ ಜೆಡಿಎಸ್‍ನಿಂದ ಯಾರೇ ಕಣಕ್ಕಿಳಿದರೂ ಅವರು ಗೆಲ್ಲುತ್ತಾರೆ ಇದರಲ್ಲಿ ಅನುಮಾನವೇ ಇಲ್ಲ. ಆದರೆ ದೇವೇಗೌಡರು ಈ ಭಾರಿಯ ಲೋಕಸಭಾ ಚುನಾವಣೆ ತಮ್ಮ ಅಂತಿಮ ಚುನಾವಣೆ ಎಂದು ಹೇಳಿಕೊಳ್ಳುತ್ತಿದ್ದಾರೆ.

ಹಾಗಾಗಿ ಅವರು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ ಪಕ್ಷದ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಬೇಕೆಂಬುದು ಎಲ್ಲರ ಒತ್ತಾಯ. ಒಂದು ವೇಳೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ದೇವೇಗೌಡರು ಸ್ಪರ್ಧಿಸಿದರೆ ಮೈತ್ರಿ ಪಕ್ಷವಾಗಿರುವ ಕಾಂಗ್ರೆಸ್ ಸಹ ಬೆಂಬಲ ನೀಡಲು ಸಿದ್ಧವಿದೆ. ಇದರಿಂದ ಪಕ್ಷಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ದೇವೇಗೌಡರ ಸ್ಪರ್ಧೆಯಿಂದ ಮುಂದಿನ ಬಿಬಿಎಂಪಿ ಚುನಾವಣೆ ಸಂದರ್ಭದಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಜೆಡಿಎಸ್‍ಗೆ ಸಾಧ್ಯವಾಗಲಿದೆ. ಪಕ್ಷದ ಬಲವರ್ಧನೆಗೂ ಅವಕಾಶವಾಗಲಿದೆ ಎಂದು ಹೇಳಲಾಗುತ್ತಿದ್ದು ಈ ಬಗ್ಗೆ ಸ್ವತಹ ದೇವೇಗೌಡರು ಸೇರಿದಂತೆ ಪಕ್ಷದಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ