ಲೋಕಸಭೆ ಚುನಾವಣೆ ಸ್ಪರ್ಧೆ-ತಮ್ಮೊಂದಿಗೆ ಯಾವುದೇ ಮುಖಂಡರು ಚರ್ಚಿಸಿಲ್ಲ-ಸಚಿವೆ ಜಯಮಾಲ

ಬೆಂಗಳೂರು, ಫೆ.27- ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ತಮ್ಮೊಂದಿಗೆ ಕಾಂಗ್ರೆಸ್ ನಾಯಕರು ಯಾವುದೇ ಚರ್ಚೆ ನಡೆಸಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ದಿವಂಗತ ಕೆ.ಸಿ.ರೆಡ್ಡಿ ಅವರ ಪುಣ್ಯ ತಿಥಿ ಅಂಗವಾಗಿ ವಿಧಾನಸೌಧದ ಬಳಿಯ ಅವರ ಪುತ್ಥಳಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರವಾಗಿ ಮಾಲಾರ್ಪಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಪಕ್ಷ ನನಗೆ ತಾಯಿ ಇದ್ದಂತೆ. ಪಕ್ಷ ಏನು ಹೇಳುತ್ತದೋ ಅದನ್ನು ಪಾಲಿಸುತ್ತೇನೆ. ಪಕ್ಷ ಹೇಳಿದಂತೆ ನಡೆದುಕೊಳ್ಳುತ್ತೇನೆ. ಸಚಿವೆಯಾಗಿ ಸದ್ಯಕ್ಕೆ ಖುಷಿಯಾಗಿದ್ದೇನೆ. ಲೋಕಸಭೆ ಚುನಾವಣೆಗೆ ಟಿಕೆಟ್ ನೀಡುವ ವಿಚಾರ ಬಂದಾಗ ಒಪ್ಪಿಕೊಳ್ಳುವುದೋ ಬಿಡುವುದೋ ಎಂಬುದನ್ನು ಯೋಚಿಸುತ್ತೇನೆ ಎಂದು ಹೇಳಿದರು.

ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿದ್ದ ಕೆ.ಸಿ.ರೆಡ್ಡಿ ಅವರು ವಿಧಾನಸೌಧ ನಿರ್ಮಾಣದಲ್ಲೂ ಶ್ರಮ ವಹಿಸಿದ್ದರು. ಕೇಂದ್ರ ಸಚಿವರಾಗಿ, ರಾಜ್ಯಪಾಲರಾಗಿ ಕೆ.ಸಿ.ರೆಡ್ಡಿ ಅವರು ಹಾಕಿಕೊಟ್ಟಿದ್ದ ಹಾದಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕಿದೆ ಎಂದರು.

ಇದೇ ವೇಳೆ ಅಕ್ಟೋಬರ್ 12ನ್ನು ಮೈಸೂರು ದಿನಾಚರಣೆಯನ್ನಾಗಿ ಆಚರಿಸುವಂತೆ ಕೆ.ಸಿ.ರೆಡ್ಡಿ ಕುಟುಂಬಸ್ಥರು ಮನವಿ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಅಮರೇಗೌಡ ಭಯ್ಯಾಪುರ, ಕೆ.ಸಿ.ರೆಡ್ಡಿ ಸರೋಜಮ್ಮ ವೆಲ್‍ಫೇರ್ ಫೌಂಡೇಶನ್ ಕಾರ್ಯದರ್ಶಿ ವಸಂತ ಕವಿತ ಕೆ.ಸಿ.ಆರ್.ರೆಡ್ಡಿ ಸೇರಿದಂತೆ ಅವರ ಕುಟುಂಬಸ್ಥರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ