ಜಮ್ಮು: ನಿನ್ನೆಯಷ್ಟೇ ಏರ್ ಸ್ಟ್ರೈಕ್ ಮೂಲಕ ಪಾಕ್ಗೆ ಬಿಸಿ ಮುಟ್ಟಿಸಿದ್ದ ಭಾರತೀಯ ಸೇನೆ, ತಡರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಗಡಿ ನಿಯಂತ್ರಣ ರೇಖೆ ಬಳಿಯಿದ್ದ ಪಾಕ್ ನೆಲೆಗಳನ್ನು ನಾಶ ಮಾಡಿದೆ ಎಂದು ತಿಳಿದುಬಂದಿದೆ.
ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಜೈಷೆ ಮೊಹ್ಮದ್ ಉಗ್ರರ ನೆಲೆಗಳನ್ನು ಭಾರತೀಯ ವಾಯುಪಡೆ ಏರ್ಸ್ಟ್ರೈಕ್ ಮೂಲಕ ಧ್ವಂಸಗೊಳಿಸಿತ್ತು. ಇದಾದ ನಂತರವೂ ಪಾಕ್ನಿಂದ ನಿರಂತರವಾಗಿ ಅಪ್ರಚೋದಿತ ದಾಳಿ ನಡೆಯುತ್ತಲೇ ಇದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ, ಪಾಕ್ನ ಐದು ನೆಲೆಗಳನ್ನು ನೆಲಕ್ಕುರುಳಿಸಿದೆ ಎನ್ನಲಾಗ್ತಿದೆ.
ಪಾಕ್ ದಾಳಿಗೆ ಪ್ರತಿಯಾಗಿ ದಾಳಿ ನಡೆಸಿದ್ದರಿಂದ ರಾಜೌರಿ ಹಾಗೂ ಪೂಂಚ್ ಜಿಲ್ಲೆಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಬಳಿ ಪಾಕ್ ಐದು ನೆಲೆಗಳನ್ನು ನಾಶ ಮಾಡಲಾಗಿದೆ. ಇದರಿಂದ ಪಾಕ್ ಸೇನೆಗೆ ಸಾಕಷ್ಟು ಪರಿಣಾಮ ಉಂಟಾಗಿದೆ ಎಂದು ರಕ್ಷಣಾ ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ. ಉರಿ ಭಾಗದಲ್ಲಿಯೂ ಪಾಕ್ ದಾಳಿ ನಡೆಸುತ್ತಿದೆ ಎಂದು ಹೇಳಲಾಗ್ತಿದೆ.
ನಿನ್ನೆ ಸಂಜೆ 6:30ರಿಂದ ಪಾಕ್ ಅಪ್ರಚೋದಿತ ಗುಂಡಿನ ಹಾಗೂ ಶೆಲ್ ದಾಳಿ ನಡೆಸುತ್ತಲೇ ಇದೆ. ಮಿಸೈಲ್ ಸೇರಿದಂತೆ ಭಾರಿ ಶಸ್ತ್ರಾಸ್ತ್ರಗಳನ್ನೇ ಬಳಸಿ ಪಾಕ್ ದಾಳಿ ಮುಂದುವರೆಸಿದೆ. ಸ್ಥಳೀಯರನ್ನು ಅಡ್ಡ ಇಟ್ಟುಕೊಂಡೇ ದಾಳಿ ನಡೆಸುತ್ತಿದೆ. ಆದರೆ ಜನವಸತಿ ಪ್ರದೇಶದಿಂದ ದೂರದಲ್ಲಿರುವ ಪಾಕ್ ನೆಲೆಗಳ ಮೇಲೆ ಮಾತ್ರ ದಾಳಿ ನಡೆಸಿದ್ದೇವೆ ಎಂದು ಪಿಆರ್ಒ ತಿಳಿಸಿದ್ದಾರೆ.