ಬೆಂಗಳೂರು, ಫೆ.27-ಲೋಕಸಭೆ ಚುನಾವಣೆಗೆ ಪೂರ್ವಸಿದ್ಧತೆಗಳನ್ನು ಆರಂಭಿಸಿರುವ ಚುನಾವಣಾ ಆಯೋಗ ಇಂದು ರಾಜ್ಯದ ಎಲ್ಲಾ ಜಿಲ್ಲಾ ಎಸ್ಪಿಗಳು ಮತ್ತು ನಗರಗಳ ಪೊಲೀಸ್ ಆಯುಕ್ತರ ಜೊತೆ ಮಹತ್ವದ ಸಮಾಲೋಚನೆ ನಡೆಸಿದೆ.
ಬಹುತೇಕ ಮುಂದಿನ ತಿಂಗಳ ಎರಡನೇ ವಾರದಲ್ಲಿ ಲೋಕಸಭೆ ಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಬಾರಿ ಚುನಾವಣೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ರಕ್ಷಣೆ, ಕಂದಾಯ ಇಲಾಖೆ ಜೊತೆ ಸಮನ್ವಯತೆಯಿಂದ ಕೆಲಸ ಮಾಡುವುದು, ಅಭ್ಯರ್ಥಿಗಳು ಹಣ ಹಾಗೂ ಇತರ ವಸ್ತುಗಳನ್ನು ಹಂಚಿ ಮತದಾರರಿಗೆ ಆಮಿಷ ತೋರಿಸುವುದು ಸೇರಿದಂತೆ ವಿವಿಧ ಅಪರಾಧಗಳ ಪತ್ತೆ ಸಂಬಂಧ ಆಯೋಗದ ಹಿರಿಯ ಅಧಿಕಾರಿಗಳು, ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥಿತವಾಗಿ ಕೆಲಸ ಮಾಡಿರುವಂತೆ ಮುಂಬರುವ ಲೋಕಸಭೆ ಚುನಾವಣೆಯಲ್ಲೂ ಅದೇ ರೀತಿ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಲಾಗಿದೆ.
ಈಗಾಗಲೇ ಪೊಲೀಸ್ ಅಧಿಕಾರಿಗಳನ್ನು ಬೇರೆ ಬೇರೆ ಕಡೆ ವರ್ಗಾವಣೆ ಮಾಡಲಾಗಿದೆ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಅತ್ಯಂತ ಸವಾಲಿನ ಕೆಲಸವಾಗಿರುವುದರಿಂದ ಪೊಲೀಸರು ಜಾಗರೂಕರಾಗಿ ಕೆಲಸ ಮಾಡಬೇಕು. ಯಾವುದೇ ಒತ್ತಡಗಳಿಗೆ ಮಣಿಯದೆ ನಿಷ್ಪಕ್ಷಪಾತ ಮತ್ತು ಶಾಂತಿಯುತ ಚುನಾವಣೆ ನಡೆಸಲು ಸಹಕರಿಸಬೇಕು ಎಂದು ಆಯೋಗದ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.