ಬಿಬಿಎಂಪಿ ಶಾಲೆಗಳ ಗುಣಮಟ್ಟ ಖಾಸಗಿ ಶಾಲೆಗಳಷ್ಟೇ ಉತ್ತಮವಾಗಿರಬೇಕು-ಪಾಲಿಕೆ ಜೊತೆ ಕೈಜೋಡಿಸಿದ ಮೈಕ್ರೋಸಾಫ್ಟ್‍ನ ರೋಶಿನಿ ಯೋಜನೆ

ಬೆಂಗಳೂರು, ಫೆ.27- ಬಿಬಿಎಂಪಿ ಶಾಲೆಗಳನ್ನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಪರಿವರ್ತನೆ ಮಾಡಲು ಪಾಲಿಕೆ ಜತೆ ಮೈಕ್ರೋಸಾಫ್ಟ್‍ನ ರೋಶಿನಿ ಯೋಜನೆ ಕೈ ಜೋಡಿಸಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಬಿಬಿಎಂಪಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಗುಣಮಟ್ಟಕ್ಕೇರಿಸುವ ಉದ್ದೇಶದಿಂದ ಮೈಕ್ರೋಸಾಫ್ಟ್ ಸಂಸ್ಥೆಯ ಸಹಯೋಗದೊಂದಿಗೆ ರೋಶಿನಿ ಯೋಜನೆಯನ್ನು ಐದು ವರ್ಷಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರ ಪ್ರಮುಖ ಭಾಗವಾಗಿ ಇಂದು ಮೂರು ಹೊಸ ಯೋಜನೆಗಳನ್ನು ಜಾರಿಗೊಳಿಸಲಾಯಿತು.

ರಾಬರ್ಟ್‍ಸನ್ ರಸ್ತೆಯ ಕ್ಲೀವ್‍ಲ್ಯಾಂಡ್ ಶಾಲೆಯ ಒಟ್ಟು 1500 ವಿದ್ಯಾರ್ಥಿಗಳಿಗೆ 65 ಇಂಚಿನ ಟಿವಿ ಮೂಲಕ ಡಿಜಿಟಲ್ ಶಿಕ್ಷಣ ಆರಂಭಿಸಲಾಗಿದೆ. ಅಲ್ಲದೆ, ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಮೇಳ ಹಮ್ಮಿಕೊಳ್ಳುವ ಯೋಜನೆ, ಹೊಸ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಲಾಯಿತು.

ಬಿಬಿಎಂಪಿ ವ್ಯಾಪ್ತಿಯ ಒಟ್ಟು 156 ಶಾಲೆ ಮತ್ತು ಕಾಲೇಜುಗಳಲ್ಲಿ 17,000 ವಿದ್ಯಾರ್ಥಿಗಳು, 800 ಶಿಕ್ಷಕರು ಇದ್ದಾರೆ. ಬೇರೆ ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದ ಹಾಗೆ ಪರಿವರ್ತನೆ ಮಾಡಲು ನಮ್ಮ ಜತೆ ಮೈಕ್ರೋಸಾಫ್ಟ್‍ನ ರೋಶಿನಿ ಯೋಜನೆ ಕೈ ಜೋಡಿಸಿದೆ ಎಂದರು.

ಟಿವಿ ಚಾನೆಲ್ ಆರಂಭದ ಬಳಿಕ ಡಿಜಿಟಲ್ ಟಿವಿಗಳು ಕೇವಲ ಟಿವಿಯಲ್ಲ. ಕಂಪ್ಯೂಟರ್‍ನಂತೆ ಕೆಲಸ ಮಾಡಲಿವೆ. ಡಿಜಿಟಲ್ ಕಂಟೆಂಟ್‍ಗಳನ್ನು ನೋಡಬಹುದು. ಟಿವಿಯನ್ನು ಬ್ಲಾಕ್‍ಬೋರ್ಡ್ ಆಗಿ ಬಳಸಬಹುದು. ಒಂದು ತರಗತಿಯಲ್ಲಿ ನಡೆಯುವ ಪಾಠ, ತಜ್ಞರ ಮಾತುಗಳನ್ನು ಉಳಿದ ತರಗತಿಗಳಲ್ಲೂ ಕುಳಿತು ಕೇಳಬಹುದು ಎಂದರು.

ಅಲ್ಲದೆ, ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಉದ್ಯೋಗದ ಅವಶ್ಯಕತೆ ಇದ್ದರೆ ಮೈಕ್ರೋಸಾಫ್ಟ್ ಸಂಸ್ಥೆಯೇ ಸಂದರ್ಶನ ಮಾಡಿ ಕೆಲಸಕ್ಕೆ ತೆಗೆದುಕೊಳ್ಳುತ್ತದೆ. ಇವರಿಗೆ ಬೇಕಾದ ತರಬೇತಿಯನ್ನು ಸಂಸ್ಥೆಯೇ ಕೊಡುತ್ತದೆ. ಅಲ್ಲದೆ, ಉನ್ನತ ಶಿಕ್ಷಣ ಹಾಗೂ ವಿದೇಶದಲ್ಲಿ ಶಿಕ್ಷಣ ಪಡೆಯುವ ಇಂಗಿತವಿದ್ದರೂ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಇದಲ್ಲದೆ, ಸ್ವ ಉದ್ಯೋಗ ಆರಂಭಿಸುವ ಇಚ್ಛೆಯಿದ್ದರೆ ಮೈಕ್ರೋಸಾಫ್ಟ್ ಸಂಸ್ಥೆ ನೆರವು ಕೂಡ ನೀಡಲಿದೆ ಎಂದರು.

ಪಾಲಿಕೆ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಇಮ್ರಾನ್ ಪಾಷ ಮಾತನಾಡಿ, ಇದೇ ಮೊದಲ ಬಾರಿಗೆ ಶಿಕ್ಷಣ ಸಮಿತಿಗಾಗಿ ಎಂಜಿನಿಯರ್ ಸೆಲ್ ತೆರೆಯಲಾಗಿದೆ. ಇಂದಿನ ಪರಿಸ್ಥಿತಿಯಲ್ಲಿ ಮಕ್ಕಳ ಶಾಲಾ ಪ್ರವೇಶಕ್ಕಾಗಿ ಪೋಷಕರು ತಮ್ಮ ಒಡವೆ, ವಸ್ತುಗಳನ್ನು ಮಾರಿ ಕಷ್ಟ ಪಡುತ್ತಾರೆ. ಅಂತಹ ಪೋಷಕರು ಇಂತಹ ಮಾದರಿಯಾದ ಬಿಬಿಎಂಪಿ ಶಾಲೆಗಳಿಗೆ ಸೇರಿಸಿ ಎಂದು ಮನವಿ ಮಾಡಿದರು.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮಾತನಾಡಿ, ವಿದ್ಯಾವಂತರಾದರೂ ಕೆಲಸ ಸಿಗುವುದೇ ಕಷ್ಟವಾಗುತ್ತಿದೆ. ಅಂಥದ್ದರಲ್ಲಿ ರೋಶಿನಿ ಯೋಜನೆಯಿಂದ ಉದ್ಯೋಗಾವಕಾಶಗಳು ಸಿಗುತ್ತಿರುವುದು ಉತ್ತಮ ವಿಚಾರ ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಗಂಗಾಂಬಿಕೆ, ಮೈಕ್ರೋಸಾಫ್ಟ್ ಟೆಕ್ ಮುಖ್ಯಸ್ಥ ಅಲಿಸೇಠ್, ಆಡಳಿತ ಪಕ್ಷದ ನಾಯಕ ವಾಜಿದ್, ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಮತ್ತಿತರರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ