ಬೆಂಗಳೂರು, ಫೆ.27- ಬಂಡೀಪುರದ ಬೆಂಕಿ ಅನಾಹುತ ನಿಯಂತ್ರಣದಲ್ಲಿ ಅರಣ್ಯ ಇಲಾಖೆ ಉತ್ತಮವಾಗಿ ಕಾರ್ಯ ನಿರ್ವಹಿಸಿದೆ. ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿರುವ ಪ್ರಾಣಿಗಳ ಮೃತಪಟ್ಟ ಚಿತ್ರಗಳು ಫೇಕ್ ಆಗಿದ್ದು ಇದನ್ನು ಯಾರೂ ನಂಬಬಾರದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಡೀಪುರದಲ್ಲಿ ಉಂಟಾಗಿದ್ದ ಕಾಡ್ಗಿಚ್ಚು ಸಂಪೂರ್ಣ ಹತೋಟಿಗೆ ಬಂದಿದೆ.ಬೆಂಕಿಯಿಂದ ಒಣ ಹುಲ್ಲು ಸುಟ್ಟು ಭಸ್ಮವಾಗಿದೆ. ಮರಗಳಿಗೆ ಹೆಚ್ಚಿನ ಹಾನಿಯಾಗಿಲ್ಲ. ಸುಮಾರು 750 ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ನಿಯಂತ್ರಣದಲ್ಲಿ ಶ್ರಮ ವಹಿಸಿದ್ದಾರೆ. ಬೆಂಗಳೂರಿನ ಅಗ್ನಿಶಾಮಕ ದಳದ ಹಿರಿಯ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು ಎಂದ ಅವರು, ಐಎಎಸ್ ಹೆಲಿಕಾಪ್ಟರ್ ಬಳಸಿ ಬೆಂಕಿ ನಂದಿಸಲು ಖುದ್ದಾಗಿ ಕೇಂದ್ರದೊಂದಿಗೆ ಮಾತನಾಡಿದ್ದೆ. ಇಂದು ಬೆಂಕಿ ತಹಬದಿಗೆ ಬಂದಿದೆ ಎಂದು ಹೇಳಿದರು.
6,000 ದಿಂದ 7,000 ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿದ್ದು , ದೊಡ್ಡ ಮಟ್ಟದ ಹಾನಿಯಾಗಿಲ್ಲ. ಇಂದು ಈ ಸಂಬಂಧ ವೈಮಾನಿಕ ಸಮೀಕ್ಷೆಯನ್ನು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಆಸು ಪಾಸಿನಲ್ಲಿ ನಡೆಸಲಾಗುತ್ತಿದೆ ಎಂದ ಅವರು, ಪ್ರವಾಸೋದ್ಯಮ ಇಲಾಖೆಯು ಕೂಡ ಬೆಂಕಿ ನಿಯಂತ್ರಣದಲ್ಲಿ ಸೂಕ್ತ ರೀತಿಯಲ್ಲಿ ಸ್ಪಂದಿಸಿತ್ತು ಎಂದರು.
ಸೀಟು ಹಂಚಿಕೆಯಲ್ಲಿ ಗೊಂದಲವಿಲ್ಲ: ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ವಿಚಾರದಲ್ಲಿ ಯಾವುದೇ ಗೊಂದಲವಿಲ್ಲ. ಮೂರ್ನಾಲ್ಕು ದಿನಗಳಲ್ಲಿ ಎಲ್ಲವೂ ಬಗೆಹರಿಯಲಿದೆ. ಯಾರ್ಯಾರು? ಎಲ್ಲೆಲ್ಲಿ? ಸ್ಪರ್ಧಿಸಬೇಕೆಂಬ ಬಗ್ಗೆ ನಿರ್ಧಾರವಾಗಲಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಯಾವುದೇ ಗೊಂದಲವಿಲ್ಲ. ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ನಡೆಯುತ್ತಿರುವುದು ಸರ್ಕಾರಿ ಕಾರ್ಯಕ್ರಮ. ಹಾಗಾಗಿ ನಿಖಿಲ್ ಯಾಕೆ ಬರ್ತಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸ್ಪರ್ಧಿಸಬೇಕೆಂದು ಹಲವರ ಒತ್ತಾಯವಾಗಿದೆ. ಈ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.