ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ: ಸಂಸದೆ ಶೋಭಾ ಕರಂದ್ಲಾಜೆ ಲೇವಡಿ

ಚಿಕ್ಕಮಗಳೂರು, ಫೆ. 26- ಮೂರು ಬಾರಿ ಮುಖ್ಯಮಂತ್ರಿ ಸ್ಥಾನ ತಪ್ಪಿತ್ತು ಎಂಬ ಪರಮೇಶ್ವರ್ ಹೇಳಿಕೆ ಕಾಂಗ್ರೆಸ್‍ನ ಮಾನಸಿಕ ಪರಿಸ್ಥಿತಿ ತೋರಿಸುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲೇವಡಿ ಮಾಡಿದರು.

ಸಚಿವ ಯು.ಟಿಖಾದರ್ ಕಾಂಗ್ರೆಸ್‍ನ ಆಂತರಿಕ ಜಗಳವನ್ನು ಬಿಜೆಪಿ ಮೇಲೆ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು.

ಯಾರು ರೆಸಾರ್ಟ್‍ನಲ್ಲಿ ಪರಸ್ಪರ ಕಿತ್ತಾಡಿದ್ದರು ಎಂಬುವುದು ಎಲ್ಲರಿಗೂ ಗೊತ್ತಿದೆ.ಆಡಳಿತದಲ್ಲಿ ವಿಫಲವಾಗಿರುವುದಕ್ಕೆ ಕಾಂಗ್ರೆಸ್‍ನವರಿಗೆ ಬುದ್ಧಿ ಭ್ರಮಣೆಯಾಗಿದೆ. ವಿರೋಧ ಪಕ್ಷವಾಗಿ ಬಿಜೆಪಿ ಸದನದ ಒಳಗೆ ಮತ್ತು ಹೊರಗೆ ತನ್ನ ಕರ್ತವ್ಯ ನಿರ್ವಹಿಸುತ್ತಿದೆ.

ಏನೂ ಕೆಲಸ ಮಾಡದವರು ತಮ್ಮ ವೈಫಲ್ಯವನ್ನು ಮುಚ್ಚಿಡಲು ಬಿಜೆಪಿ ತಲೆಗೆ ಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದ ಅವರು ಎಷ್ಟು ಸಚಿವರು ರಾಜ್ಯದಲ್ಲಿ ಪ್ರವಾಸ ಮಾಡಿದ್ದಾರೆ ಎಂದು ಪ್ರಶ್ನಿಸಿದರು.ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ ಬರಪರಿಹಾರ ನಿಧಿ ಮೊದಲ ಕುರಿತಾಗಿ 949ಕೋಟಿ ಬಿಡುಗಡೆಗೊಳಿಸಿದೆ. ಆದರೆ ರಾಜ್ಯ ಸರಕಾರ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಹೋದ ಕಡೆ ಹೇಳಿಕೊಳ್ಳುತ್ತಿದೆ.ಈ ಮೈತ್ರಿ ಸರಕಾರ ಮನಬಂದಂತೆ 6ತಿಂಗಳಿಗೊಮ್ಮೆ 3ತಿಂಗಳಿಗೊಮ್ಮೆ ಅಧಿಕಾರಿಗಳ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದರು.

ರಾಜ್ಯದ 28 ಲೋಕಸಭಾ ಕ್ಷೇತ್ರದ ಪೈಕಿ 25 ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲಬೇಕೆಂಬ ಗುರಿಯನ್ನು ರಾಷ್ಟ್ರೀಯ ಅಧ್ಯಕ್ಷರು ನೀಡಿದ್ದಾರೆ. ದೊಡ್ಡ ಪ್ರಮಾಣದಲ್ಲಿ ತಯಾರಿ ನಡೆಸುತ್ತಿದೆ.

ಗೋಬ್ಯಾಕ್ ಶೋಭಕ್ಕ: ಕಳೆದ 15ದಿನಗಳಿಂದ ಕೆಲ ಟಿಕೆಟ್ ಆಕಾಂಕ್ಷಿಗಳು ತಮ್ಮ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಗೋಬ್ಯಾಕ್ ಶೋಭಕ್ಕ ಎಂಬ ಬರಹವನ್ನು ಪ್ರಕಟಿಸುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಸುದ್ದಿ ಹಬ್ಬಿಸುತ್ತಿರುವುದಕ್ಕೂ ನಮ್ಮ ಪಕ್ಷದ ಯಾವುದೇ ಚಟುವಟಿಕೆಗೂ ಸಂಬಂಧ ಇಲ್ಲ ಎಂದರು.

ಶಾಸಕ ಸಿ.ಟಿ.ರವಿ ಮಾತನಾಡಿ ಕಾರ್ಯಕರ್ತರು ಅಭಿಪ್ರಾಯ ಹೇಳಲು ಪಕ್ಷದ ಒಳವೇದಿಕೆ ಇದೆ. ಹೊರಗಡೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಾರದು ಪಕ್ಷ ಟಿಕೆಟ್ ನೀಡಿದವರ ಪರವಾಗಿ ನಾನು ಸೇರಿದಂತೆ ಪ್ರತಿಯೊಬ್ಬರು ಕೆಲಸ ಮಾಡುತ್ತೇವೆ ಎಲ್ಲರನ್ನು ಎಲ್ಲ ಕಾಲಕ್ಕೂ ಸರ್ವಾನುಮತದಿಂದ ಒಪ್ಪಿಕೊಳ್ಳಲಾಗದು ಬಹುಮತದ ಆಧಾರದ ಮೇಲೆ ತೀರ್ಮಾನವಾಗುತ್ತದೆ ಎಂದು ಮಾರ್ಮಿಕವಾಗಿ ನುಡಿದರು.

ಬೇಸಿಗೆಯಲ್ಲಿ ಕಾಡ್ಗಿಚ್ಚು ಉಂಟಾಗುವುದು ಸಹಜ ಮುಂಜಾಗ್ರತೆಯಾಗಿ ನಿಯಂತ್ರಣಕ್ಕೆ ಕ್ರಮವಹಿಸುವುದು ಅರಣ್ಯ ಇಲಾಖೆ ಕೆಲಸ. ರಾಜ್ಯದಲ್ಲಿ ಬೆಂಕಿ ಅವಘಡಕ್ಕೆ ಜಿಲ್ಲೆಯ ಕಾಡು ಸೇರಿದಂತೆ ಇತರೆಡೆ ಅಪಾರ ನಷ್ಟವಾಗಿದೆ.ಬೆಂಕಿ ನಿಯಂತ್ರಣಕ್ಕೆ ಸರಕಾರ ಕ್ರಮ ವಹಿಸಬೇಕೆಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ