ಬೆಂಗಳೂರು, ಫೆ.26- ಬೆಂಗಳೂರಿನ ಬಿಜಿಎಸ್ ಗ್ಲೆನಿಗಲ್ಸ್ ಗ್ಲೋಬಲ್ ಹಾಸ್ಪಿಟಲ್ನ ವೈದ್ಯರು ರಾಜ್ಯದ ಮೊದಲ ಎರಡು ಶ್ವಾಸಕೋಶಗಳ ಕಸಿ ಮತ್ತು ಕರೊನರಿ ಆರ್ಟರಿ ಬೈಪಾಸ್ ಗ್ರಾಫ್ಟಿಂಗ್ ಶಸ್ತ್ರಚಿಕಿತ್ಸೆ ಏಕಕಾಲಕ್ಕೆ (ಸಿಎಬಿಜಿ) ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದುವರೆಗೆ ಕರೊನರಿ ಹೃದಯ ರೋಗ (ಹಾರ್ಟ್ ಬ್ಲಾಕ್ಸ್) ಇದ್ದ ಬಹುತೇಕ ಜನರು ಶ್ವಾಸಕೋಶ ಕಸಿಯನ್ನು ಪರಿಗಣಿಸುತ್ತಿರಲಿಲ್ಲ. ಕೇವಲ ವಿದೇಶದಲ್ಲಿನ ಸುಸಜ್ಜಿತವಾದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ ಪರಿಣತ ವೈದ್ಯರ ತಂಡಗಳು ಇಂತಹ ಸಂಕೀರ್ಣವಾದ ಸರ್ಜರಿಗಳನ್ನು ನಡೆಸುತ್ತಿದ್ದವು. ಹಲವಾರು ಅಪಾಯಗಳನ್ನು ಒಳಗೊಂಡ ಶ್ವಾಸಕೋಶ ಕಸಿ ಮತ್ತು ಕರೊನರಿ ಆರ್ಟರಿ ಬೈಪಾಸ್ ಸರ್ಜರಿ (ಸಿಎಬಿಜಿ)ಯನ್ನು ಕೈಗೊಳ್ಳುವುದು ತುಂಬಾ ಗಂಭೀರ ಸ್ವರೂಪದ್ದಾಗಿದೆ.
ಜೋರ್ಡಾನ್ ದೇಶದ 61 ವರ್ಷ ವಯಸಿನ ಇಶಾಕ್ ಅಬ್ದೆಲ್ ಹಕೀಂ ಅಹ್ಮದ್ ಶರ್ವಾಯಿ ಅವರನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರ ಎರಡೂ ಶ್ವಾಸಕೋಶಗಳು ನಸುಗೆಂಪು ಬಣ್ಣಕ್ಕೆ ತಿರುಗಿದ್ದು ಹಾನಿಗೊಂಡಿದ್ದವು. ಈ ಮೂಲಕ ಅವರು ಶ್ವಾಸಕೋಶ ರೋಗದಿಂದ ಬಳಲುತ್ತಿದ್ದರು.
ಅವರು ಸಂಪೂರ್ಣವಾಗಿ ಗಾಲಿ ಕುರ್ಚಿಯ ಮೇಲೆ ಇರಬೇಕಾಗಿತ್ತು ಮತ್ತು ಪ್ರತಿ ನಿಮಿಷಕ್ಕೆ 10 ಲೀಟರ್ನಷ್ಟು ಆಮ್ಲಜನಕದ ಮೇಲೆ ಅವಲಂಬಿತರಾಗಿದ್ದರು. ಹೀಗೆ ದಿನದ 24 ಗಂಟೆಯೂ ಅವರಿಗೆ ಆಮ್ಲಜನಕದ ಅಗತ್ಯತೆ ಇತ್ತು.ಅವರಿಗೆ ಶ್ವಾಸಕೋಶದ ಕಸಿ ಮಾಡಲು ನಿರ್ಧರಿಸಲಾಯಿತು.
ಆದರೆ, ಅವರ ಹೃದಯದ ರಕ್ತನಾಳಗಳಲ್ಲಿ 2 ದೊಡ್ಡ ಪ್ರಮಾಣದ ಬ್ಲಾಕ್ಗಳಿರುವುದು ಪತ್ತೆಯಾಯಿತು.ಈ ಹಿನ್ನೆಲೆಯಲ್ಲಿ ಅವರ ಆರೋಗ್ಯ ಕ್ಷೀಣಿಸುತ್ತಿದ್ದುದರಿಂದ ಡಾ.ಸಂದೀಪ್ ಅತ್ತಾವರ ನೇತೃತ್ವದ ಹೃದಯ ಮತ್ತು ಶ್ವಾಸಕೋಶ ಕಸಿ ಸರ್ಜನ್ಗಳ ತಂಡವು ಹೃದಯ ಬೈಪಾಸ್ ಸರ್ಜರಿ ಜತೆಯಲ್ಲೇ ಶ್ವಾಸಕೋಶಗಳ ಕಸಿ ಶಸ್ತ್ರಚಿಕಿತ್ಸೆ ನಡೆಸಲು ನಿರ್ಧರಿಸಿತು.
ಕಾರ್ಡಿಯೋಪಲ್ಮೊನರಿ ಬೈಪಾಸ್ ಯಂತ್ರದ ನೆರವಿನಿಂದ ಶ್ವಾಸಕೋಶದ ಕಸಿ ಶಸ್ತ್ರಚಿಕಿತ್ಸೆಯನ್ನು ನಡೆಸಲಾಯಿತು.ಈ ಕಸಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡ ನಂತರ ರೋಗಿಯ ಕಾಲಿನಿಂದ ಒಂದು ರಕ್ತನಾಳವನ್ನು ತೆಗೆದು ಶ್ವಾಸಕೋಶಕ್ಕೆ ಅಳವಡಿಸಲಾಯಿತು ಮತ್ತು ಅವರ ಹೃದಯದಲ್ಲಿ ಹೊಂದಿದ್ದ 2 ಬ್ಲಾಕ್ಗಳನ್ನು ತೆರವುಗೊಳಿಸಲು ಬೈಪಾಸ್ ಸರ್ಜರಿಯನ್ನೂ ನೆರವೇರಿಸಲಾಯಿತು.
ಈ ಸಂಪೂರ್ಣ ಸರ್ಜರಿ ಸತತ ಐದೂವರೆ ಗಂಟೆ ನಡೆಯಿತು. ಡಾ.ಗೋವಿನಿ ಬಾಲಸುಬ್ರಮಣಿ, ಡಾ.ಭಾಸ್ಕರ್ ಬಿ.ವಿ ಮತ್ತು ಡಾ.ಮಧುಸೂದನ ನೇತೃತ್ವದ ಕಾರ್ಡಿಯೋಥೋರಾಸಿಸ್ ಅಂಡ್ ವಾಸ್ಕುಲರ್ (ಸಿಟಿವಿಎಸ್) ಸರ್ಜನ್ಗಳ ತಂಡವು ಡಾ.ಅತ್ತಾವರ್ ಅವರಿಗೆ ಈ ಸರ್ಜರಿಯಲ್ಲಿ ನೆರವಾಯಿತು.
ಅನೆಸ್ತೇಸಿಯಾ ಮತ್ತು ತುರ್ತು ನಿಗಾವನ್ನು ಖ್ಯಾತ ಕಾರ್ಡಿಯಾಕ್ ಅನೇಸ್ತಿಯಾ ತಜ್ಞರಾದ ಡಾ.ಪ್ರಭಾತ್ ದತ್ತ ಅವರು ನೋಡಿಕೊಂಡರು. ಇವರಿಗೆ ಡಾ.ಅನೂಪ್ ಮೋಹನ್ದಾಸ್ ಮತ್ತು ಡಾ.ಶಿವಪ್ರಕಾಶ್ ಅವರು ನೆರವಾದರು.