ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದ ಖೈಬರ್ ಕಣಿವೆಯ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಸ್ಥಳೀಯ ಬೇಹುಗಾರಿಕೆ ಮೂಲಗಳು ನೀಡಿದ ಮಾಹಿತಿಯನ್ನ ಆಧರಿಸಿ ಪಕ್ಕಾ ಗ್ರೌಂಡ್ ರಿಪೋರ್ಟ್ ಪಡೆದು ಭಾರತ ಪಾಕ್ ನೆಲದಲ್ಲಿ ಏರ್ ಸ್ಟ್ರೈಕ್ ಮಾಡಲಾಗಿದೆ ಎಂದು ಸೇನಾ ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ಭಾರತೀಯ ವಾಯುಪಡೆಯ ಮಿರಾಜ್ ಜೆಟ್ ಪಾಕಿಸ್ತಾನದ ಖೈಬರ್ ಕಣಿವೆಯಲ್ಲಿ ನಿಖರವಾದ ಸ್ಥಳವನ್ನ ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿರುವುದನ್ನ ಸರ್ಕಾರದ ಮೂಲಗಳೇ ದೃಢಪಡಿಸಿವೆ.
ಭಾರತದ ದಾಳಿಯನ್ನ ಗುರುತಿಸಿದ ಪಾಕಿಸ್ತಾನ ಅಮೆರಿಕ ಎಫ್ -16 ವಿಮಾನಗಳನ್ನ ಕಳುಹಿಸಿ ಮಿರಾಜ್ ಹೊಡೆದುರುಳಿಸಿರುವ ಯೋಜನೆ ರೂಪಿಸಿತ್ತು. ಎಫ್- 16 ಟೆಕ್ ಆಫ್ ಆಗುವಷ್ಟರಲ್ಲಿ ಮಿರಾಜ್ ತನ್ನ ಕೆಲಸ ಮುಗಿಸಿ ಭಾರತದ ನೆಲಕ್ಕೆ ವಾಪಸ್ ಆಗಿತ್ತು.
ಈ ನಡುವೆ, ಪಾಕಿಸ್ತಾನ ಸರ್ಕಾರ ತುರ್ತು ಸಭೆ ನಡೆಸಿ ದಾಳಿ ಬಗ್ಗೆ ಗಂಭೀರ ಸಮಾಲೋಚನೆ ನಡೆಸಿದ್ದು, ಮುಂದೇನು ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಪಾಕ್ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ನೇತೃತ್ವದಲ್ಲಿ ಈ ಸಭೆ ನಡೆದಿದೆ.