ಬಾಗೇಪಲ್ಲಿ, ಫೆ.25- ಅಕ್ರಮ ಮರಳು ಸಾಗಾಣಿಕೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ರಾತ್ರಿ ವೇಳೆ ಮರಳು ಸಾಗಾಣೆ ಮಾಡುತ್ತಿದ್ದ ಟಿಪ್ಪರ್ ಲಾರಿ, ಕಾರು ಹಾಗೂ ಚಾಲಕರಿಬ್ಬರನ್ನು ಬಾಗೇಪಲ್ಲಿ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ತಡರಾತ್ರಿ ತಾಲ್ಲೂಕಿನ ಶಂಕಂವಾರಪಲ್ಲಿ ಗ್ರಾಮದ ಬಳಿ ಮರಳು ತುಂಬಿಕೊಂಡು ಟಿಪ್ಪರ್ ಲಾರಿಯೊಂದು ಬೆಂಗಳೂರಿನತ್ತ ಸಾಗುತ್ತಿತ್ತು. ಲಾರಿಯ ಬೆಂಗಾವಲಾಗಿ ಹಿಂದೆ ಕಾರು ಹೋಗುತ್ತಿತ್ತು.
ಇದರ ಬಗ್ಗೆ ನಿಖರ ಮಾಹಿತಿ ತಿಳಿದ ಗಸ್ತಿನಲ್ಲಿದ್ದ ಪೊಲೀಸರ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಲಾರಿ ಚಾಲಕ ರಮೇಶ್ ಹಾಗೂ ಕಾರು ಮಾಲೀಕನನ್ನು ವಾಹನ ಸಮೇತ ವಶಪಡಿಸಿಕೊಂಡಿದ್ದಾರೆ.
ಹಲವಾರು ದಿನಗಳಿಂದ ಈ ಪ್ರದೇಶದಲ್ಲಿ ಅಕ್ರಮ ಮರಳು ಸಾಗಾಣೆ ನಡೆಯುತ್ತಿದೆ ಎಂಬ ಮಾತುಗಳು ಕೇಳುತ್ತಿದ್ದವು. ಚಿಕ್ಕಬಳ್ಳಾಪುರ ಜಿಲ್ಲೆಗೆ ನೂತನ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡ ಸಂತೋಷ್ ಬಾಬು ಅವರು ಅಕ್ರಮ ಮರಳು ಸಾಗಾಣಿಕೆ ವಿರುದ್ಧ ಕ್ರಮ ಕೈಗೊಂಡು ಹಲವಾರು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.