ಶ್ರೀರಂಗಪಟ್ಟಣ, ಫೆ.25- ತಾಲ್ಲೂಕಿನ ವಿವಿಧ ಬಯಲು ಪ್ರದೇಶಗಳಲ್ಲಿ ಆಗಾಗ್ಗೆ ಚಿರತೆಗಳು ಪ್ರತ್ಯಕ್ಷಗೊಳ್ಳುತ್ತಿದ್ದು , ಹತ್ತಿರದಿಂದಲೇ ನೋಡುತ್ತಿರುವ ಜನತೆ ಆತಂಕದಿಂದ ಕಾಲಕಳೆಯುವಂತಾಗಿದೆ.
ಮೊನ್ನೆಯಷ್ಟೇ ತಾಲ್ಲೂಕಿನ ಅಲ್ಲಾಪಟ್ಟಣ ಗ್ರಾಮದ ಹೊರವಲಯದಲ್ಲಿ ಕುರಿಯೊಂದರ ಮೇಲೆ ದಾಳಿ ನಡೆಸಿ ಜನರಲ್ಲಿ ಆತಂಕ ಮೂಡಿಸಿದೆ.
ಕರಿಘಟ್ಟದ ಸುತ್ತ-ಮುತ್ತಲಿನ ಗಣಂಗೂರು ಅರಣ್ಯ ಪ್ರದೇಶ ಹಾಗೂ ಹುಂಜನಕೆರೆ ಅರಣ್ಯ ಪ್ರದೇಶಗಳಲ್ಲೂ ಚಿರತೆಗಳು ಗ್ರಾಮಸ್ಥರ ಕಣ್ಣಿಗೆ ಕಾಣಿಸುತ್ತಿದ್ದು, ಟಿ.ಎಂ.ಹೊಸೂರಿನ ಇಬ್ಬರು ಯುವಕರು ಚಿರತೆ ದಾಳಿಯಿಂದ ಪಾರಾಗಿದ್ದರು.
ಚಿರತೆಗಳಿಂದ ರಕ್ಷಿಸುವಂತೆ ತಾಲ್ಲೂಕಿನ ವಿವಿಧ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಚಿರತೆಗಳನ್ನು ಹಿಡಿಯುವ ಕ್ರಮವಾಗಿ ಅಲ್ಲಾಪಟ್ಟಣ ಗ್ರಾಮದಲ್ಲಿ ಅಧಿಕಾರಿಗಳ ತಂಡ ಬೋನನ್ನು ಇರಿಸಿದೆ.
ಒಂದು ತಿಂಗಳ ಹಿಂದೆಯಷ್ಟೆ ಕರಿಘಟ್ಟ ಅರಣ್ಯ ಪ್ರದೇಶದಲ್ಲಿ ಒಂದು ಚಿರತೆಯನ್ನು ಹಿಡಿದು ಕಾವೇರಿ ವನ್ಯಜೀವಿ ಸಂರಕ್ಷಣ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವ ಅಧಿಕಾರಿಗಳು ಇದೀಗ ಮತ್ತೊಮ್ಮೆ ಚಿರತೆಗಾಗಿ ಬಲೆ ಬೀಸಿ ಕಾದು ಕುಳಿತಿದ್ದಾರೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ ಅಲ್ಲಾಪಟ್ಟಣ ಹಾಗೂ ಕಾರೇಕುರ ಗ್ರಾಮದ ಬಳಿ ಐದಾರು ಚಿರತೆಗಳು ಬೀಡು ಬಿಟ್ಟಿದ್ದು, ಗ್ರಾಮಸ್ಥರು ಆತಂಕದಿಂದ ಕಾಲ ಕಳೆಯುವಂತಾಗಿದೆ.