ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ-ಮಾಜಿ ಸಿ.ಎಂ.ಸಿದ್ದರಾಮಯ್ಯ

ಹುಬ್ಬಳ್ಳಿ, ಫೆ.25- ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ರಾಜ್ಯ ರಾಜಕಾರಣದಲ್ಲೇ ಇರುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ ರಾಜಕಾರಣದ ಬಗ್ಗೆ ನನಗೆ ಆಸಕ್ತಿ ಇಲ್ಲ. ರಾಜ್ಯ ರಾಜಕಾರಣದಲ್ಲೇ ಸಕ್ರಿಯವಾಗಿ ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವುದು ನಮ್ಮ ಉದ್ದೇಶ. ಲೋಕಸಭೆ ಚುನಾವಣೆ ಸ್ಪರ್ಧೆ ಬಗ್ಗೆ ಹೈಕಮಾಂಡ್ ನನಗೆ ಏನೂ ಹೇಳುವುದಿಲ್ಲ ಎಂದು ತಿಳಿಸಿದರು.

ಕೊಪ್ಪಳ ಲೋಕಸಭೆ ಕ್ಷೇತ್ರದಲ್ಲಿ ಚುನಾವಣಾ ಕಣಕ್ಕಿಳಿಯುವಂತೆ ಸಿದ್ದರಾಮಯ್ಯನವರಿಗೆ ಒತ್ತಡ ಕೇಳಿಬಂದಿತ್ತು. ಆದರೆ, ಸಿದ್ದರಾಮಯ್ಯನವರು ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇನ್ನು ಆಪರೇಷನ್ ಕಮಲ ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ವಹಿಸಬೇಕೆಂದು ಸದನದಲ್ಲಿ ಭಾರೀ ಫೈಟ್ ಮಾಡಿದ್ದರು. ಸ್ಪೀಕರ್ ರಮೇಶ್‍ಕುಮಾರ್ ಅವರು ಎಸ್‍ಐಟಿಗೆ ವಹಿಸಲು ಒಪ್ಪದಿದ್ದರೂ ಕೂಡ ನಾವು ಬಿಡುವುದಿಲ್ಲ. ಈ ಪ್ರಕರಣವನ್ನು ಎಸ್‍ಐಟಿಗೆ ವಹಿಸುತ್ತೇವೆ. ಆಪರೇಷನ್ ಕಮಲದ ವಿರುದ್ಧ ರಾಷ್ಟ್ರಕ್ಕೆ ಒಂದು ಸಂದೇಶ ಕಳುಹಿಸಬೇಕಿದೆ ಎಂದು ಗುಡುಗಿದ್ದ ಸಿದ್ದರಾಮಯ್ಯನವರು ಈ ಆಡಿಯೋ ಪ್ರಕರಣವನ್ನು ಎಸ್‍ಐಟಿಗೆ ವಹಿಸುವುದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ. ಅದನ್ನು ನಾನು ಮಾಡಲು ಬರುವುದಿಲ್ಲ ಮೃದುಧೋರಣೆಯ ಮಾತುಗಳನ್ನು ಆಡಿದ್ದಾರೆ.

ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸ್ಪರ್ಧೆ ವಿಚಾರವಾಗಿ ಸುಮಲತಾ ಅಂಬರೀಶ್ ಅವರು ನನ್ನನ್ನು ಭೇಟಿ ಮಾಡಿದ್ದರು. ಸಮನ್ವಯ ಸಮಿತಿ ಸಭೆಯಲ್ಲಿ ಸೀಟು ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ದಲಿತರಿಗೆ ಕಾಂಗ್ರೆಸ್‍ನಲ್ಲಿ ಅನ್ಯಾಯವಾಗುತ್ತಿದೆ ಎಂದು ಡಾ.ಜಿ.ಪರಮೇಶ್ವರ್ ಹೇಳಿರುವ ವಿಚಾರ ನನಗೆ ಗೊತ್ತಿಲ್ಲ. ಈ ಪ್ರಶ್ನೆಯನ್ನು ನೀವು ಅವರಿಗೇ ಕೇಳಿ ಉತ್ತರ ಪಡೆಯಿರಿ. ಅವರು ಯಾವ ಮನಸ್ಥಿತಿಯಲ್ಲಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ ಎಂದು ತಿಳಿಸಿದರು.

ಒಂದೇ ವಿಮಾನದಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ಪ್ರಯಾಣ ಬೆಳೆಸಿದ ಯಡಿಯೂರಪ್ಪ, ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಪರಸ್ಪರ ಹಸ್ತಲಾಘವ ಮಾಡಿ ಬೇರೆ ಬೇರೆ ಕಾರ್ಯಕ್ರಮಗಳಿಗೆ ತೆರಳಿದರು.

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ, ರಾಜಕೀಯವಾಗಿ ವೇದಿಕೆಯಲ್ಲಿ, ಸದನದಲ್ಲಿ ಬಹಿರಂಗವಾಗಿ ಬಡಿದಾಡಿಕೊಳ್ಳುವ ಇವರು ವೈಯಕ್ತಿಕವಾಗಿ ಚೆನ್ನಾಗಿಯೇ ಇರುತ್ತಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ