ಟಿ.ನರಸೀಪುರ, ಫೆ.25- ಗಜಾರಣ್ಯ ಕ್ಷೇತ್ರ, ಐತಿಹಾಸಿಕ ಪ್ರವಾಸಿ ತಾಣ ತಾಲ್ಲೂಕಿನ ತಲಕಾಡು ಮರಳು ಗುಡ್ಡೆಯಲ್ಲಿರುವ ಅರಣ್ಯ ಪ್ರದೇಶಕ್ಕೆ ಬೆಂಕಿ ಬಿದ್ದು ಸುಮಾರು 20 ಎಕರೆಗೂ ಹೆಚ್ಚು ಕಾಡು ಸುಟ್ಟು ಭಸ್ಮವಾಗಿರುವ ಘಟನೆ ನಿನ್ನೆ ಜರುಗಿದೆ.
ಕಾವೇರಿ ನದಿ ತೀರಕ್ಕೆ ಹೊಂದಿಕೊಂಡಿರುವ ನೂರಾರು ಎಕರೆಯ ಈ ಕಾಡು ಅರಣ್ಯ ಇಲಾಖೆಗೆ ಸೇರಿದ್ದು. ಪ್ರತಿ ದಿನ ಇಲ್ಲಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ರಜಾ ದಿನಗಳಲ್ಲಂತೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ. ಬರುವ ಪ್ರವಾಸಿಗರು ಇಲ್ಲಿನ ವೈದ್ಯನಾಥೇಶ್ವರ, ಪಾತಾಳೇಶ್ವರ, ಕೀರ್ತಿನಾರಾಯಣಸ್ವಾಮಿ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಕಾವೇರಿ ನದಿಯಲ್ಲಿ ಮಿಂದೇಳುತ್ತಾರೆ. ಮರಳುಗುಡ್ಡೆಯಲ್ಲಿ ನೀಲಗಿರಿ, ಗೇರು ಹಾಗೂ ಇನ್ನಿತರೆ ಮರಗಳು ಹುಲುಸಾಗಿ ಬೆಳೆದು ನಿಂತಿವೆ.
ನಿನ್ನೆ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದು, ಮಧ್ಯಾಹ್ನ ಸುಮಾರು 12ರ ವೇಳೆಗೆ ಯಾರೋ ದುಷ್ಕರ್ಮಿಗಳು ಮರಳುಗುಡ್ಡೆ ಅರಣ್ಯ ಪ್ರದೇಶಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಕಾಡಿನಲ್ಲಿ ಬೆಂಕಿ ವ್ಯಾಪಿಸುತ್ತಿರುವುದನ್ನು ಮನಗಂಡ ಸ್ಥಳಿಯ ಯುವಕರಾದ ದೀಪು ಮತ್ತು ಶ್ರೀನಿವಾಸ್ ಎಂಬುವರು ಸಮಯ ಪ್ರಜ್ಞೆ ಮೆರೆದು ಕೂಡಲೆ ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ.